ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಗುರುವಾರದಂದು ಸೇನಾ ವಾಹನದ ಮೇಲೆ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಹೆಸರನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಘಟನೆಯಲ್ಲಿ ಹವಾಲ್ದಾರ್ ಮನ್ದೀಪ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಾಶಿಶ್ ಬಸ್ವಾಲ್, ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಹರ್ಕ್ರಿಶನ್ ಸಿಂಗ್ ಮತ್ತು ಸಿಪಾಯಿ ಸೇವಕ್ ಸಿಂಗ್ ಎಂಬ ಯೋಧರು ಹತಾತ್ಮರಾಗಿರುವುದಾಗಿ ಸೇನೆ ತಿಳಿಸಿದೆ. ಹುತಾತ್ಮ ಯೋಧರು ರಾಷ್ಟ್ರೀಯ ರೈಫಲ್ಸ್ ಪಡೆಯಲ್ಲಿ ಪೂಂಚ್ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು ಎಂದು ಟ್ವಿಟರ್ ಮೂಲಕ ಸೇನೆ ತಿಳಿಸಿದೆ.
ಜಮ್ಮುವಿನ ರಜೌರಿ ಸೆಕ್ಟರ್‌ನಲ್ಲಿ ಸೇನಾ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭಯೋತ್ಪಾದಕರು ಈ ದುಷ್ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಇನ್ನೂ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಈ ವರೆಗೂ ದಾಳಿಕೋರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಿನ್ನೆ ದಿನ ಈ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಮಂಜು ಆವರಿಸಿದ್ದರ ಲಾಭ ಪಡೆದ ಭಯೋತ್ಪಾದಕರು ಕೃತ್ಯ ಎಸಗಿದ್ದಾರೆ ಎಂದು 16 ಕಾರ್ಪ್ಸ್ ಸೇನೆ ತಿಳಿಸಿದೆ. ಹುತಾತ್ಮ ಯೋಧರಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಭಾರತೀಯ ಸೈನಿಕರು ಗೌರವ ನಮನ ಸಲ್ಲಿಸಿದ್ದಾರೆ.
ಘಟನೆ ಹಿನ್ನೆಲೆ : ನಿನ್ನೆ ದಿನ ಗಡಿ ಜಿಲ್ಲೆ ಪೊಂಚ್ನಲ್ಲಿ ಚಲಿಸುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದರು. ಇದರಿಂದ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಯೋಧರು ಹುತಾತ್ಮರಾಗಿದ್ದರು. ಭಟ ಧುರಿಯನ್ ಪ್ರದೇಶದ ಹೆದ್ದಾರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿತ್ತು. ಘಟನೆಯಲ್ಲಿ ಸೇನಾವಾಹ ಸಂಪೂರ್ಣ ಬೆಂಕಿಗಾಹುತಿಯಾದ ಪರಿಣಾಮ ಐವರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದರು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದರು.
ಒಳ ನುಸಳುವಿಕೆ ಯತ್ನಗಳು: ಇನ್ನು ಪೂಂಚ್ ಜಮ್ಮುವಿನ ಗಡಿ ಜಿಲ್ಲೆಯಾಗಿದ್ದು ಇಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನಗಳು ಆಗಾಗ ನಡೆಯುತ್ತಿರುತ್ತವೆ. ಇದಕ್ಕೆ ಕಡಿವಾಣ ಹಾಕಲು ಭಾರತೀಯ ಸೇನೆ ಮತ್ತು ಪೊಲೀಸ್ ಇಲಾಖೆ ಸದಾ ಕಾರ್ಯಾಚರಣೆಯಲ್ಲಿದ್ದು ಹೆಚ್ಚಿನ ಭದ್ರತೆಯನ್ನು ಕೈಗೊಂಡಿರುತ್ತದೆ. ತಿಂಗಳ ಆರಂಭದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪೂಂಚ್ ಸೆಕ್ಟರ್‌ನಲ್ಲಿ ಭಾರತೀಯ ಸೇನಾ ಪಡೆಯು ಪ್ರಮುಖ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿತ್ತು.
ಏ. 8 ಮತ್ತು 9ರಂದು ತಡರಾತ್ರಿ ಎಲ್‌ಒಸಿಯಲ್ಲಿ ಕೆಲ ವ್ಯಕ್ತಿಗಳ ಅನುಮಾನಾಸ್ಪದ ಚಲನವಲನಗಳನ್ನು ಸೇನಾ ಪಡೆಗಳು ಪತ್ತೆಹಚ್ಚಿದ್ದವು. ಶಂಕಿತ ನುಸುಳುಕೋರರು ಕಂಡುಬಂದ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಸುತ್ತುವರಿದು ಸೇನಾ ಪಡೆ ಕಾರ್ಯಾಚರಣೆ ನಡೆಸಿತ್ತು. ಅಲ್ಲದೇ ಸೇನಾ ಗುಂಡಿನ ದಾಳಿಯಲ್ಲಿ ಓರ್ವ ನುಸಳುಕೋರ ಹತನಾಗಿದ್ದ. ಇನ್ನುಳಿದ ಶಂಕಿತರು ಅರಣ್ಯ ಪ್ರದೇಶಕ್ಕೆ ಓಡಿಹೋಗಿ ಅಲ್ಲಿಂದ ತಪ್ಪಿಸಿಕೊಂಡಿದ್ದರು. ಮಾರ್ಚ್‌ನಲ್ಲೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನಾ ಪಡೆ ಜಂಟಿ ಕಾರ್ಯಾಚರಣೆ ಕೈಗೊಂಡು ತಂಗ್‌ಧರ್ ಸೆಕ್ಟರ್‌ನಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದರು. ಅಲ್ಲದೇ 200ಕ್ಕೂ ಹೆಚ್ಚು ಎಕೆ ರೈಫಲ್ಸ್ ಬುಲೆಟ್ಗಳು, ಮೂರು ಮ್ಯಾಗಜೀನ್‌ಗಳು, ಎರಡು ಚೀನಾ ನಿರ್ಮಿತ ಗ್ರೆನೇಡ್‌ಗಳು ಔಷಧಗಳು ಮತ್ತು ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: ಪೂಂಚ್‌ನಲ್ಲಿ ಸೇನಾ ವಾಹನದ ಗ್ರೆನೇಡ್ ಎಸೆದ ಉಗ್ರರು: ಐವರು ಸೈನಿಕರು ಹುತಾತ್ಮ