ನವದೆಹಲಿ : ಭಾರತ-ಚೀನಾ ಗಡಿಭಾಗವಾದ ಪೂರ್ವ ಲಡಾಖ್ ವಲಯದಲ್ಲಿ ನಿಯೋಜಿಸಲೆಂದು ಭಾರತೀಯ ಸೇನೆಯು ಇಸ್ರೇಲ್ನಿಂದ ನಾಲ್ಕು ಹೆರಾನ್ ಡ್ರೋನ್‌ಗಳನ್ನು ತರಿಸಿಕೊಂಡಿದೆ. ಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾಗಿ ಡ್ರೋನ್‌ಗಳು ಭಾರತದ ಕೈ ಸೇರುವಂತಾಯಿತು.
ಸುಧಾರಿತ ಹೆರಾನ್ ಡ್ರೋನ್‌ಗಳು ದೇಶಕ್ಕೆ ಬಂದಿವೆ ಮತ್ತು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಚೀನಾದ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲು ಈ ಡ್ರೋನ್ಗಳನ್ನ ನಿಯೋಜಿಸಲಾಗುವುದು. ಸುಧಾರಿತ ಡ್ರೋನ್‌ಗಳ ಆ್ಯಂಟಿ-ಜಾಮಿಂಗ್ ಸಾಮರ್ಥ್ಯವು ಅವುಗಳ ಹಿಂದಿನ ಆವೃತ್ತಿಗಳಿಗಿಂತ ಉತ್ತಮವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಕ್ಷಣಾ ಪಡೆಗಳಿಗೆ ನೀಡಲಾದ 'ತುರ್ತು ಹಣಕಾಸು ಅಧಿಕಾರ'ದ ಅಡಿಯಲ್ಲಿ ಈ ಡ್ರೋನ್‌ಗಳನ್ನು ಪಡೆಯಲಾಗಿದೆ. ಈ ಅಧಿಕಾರದ ಅಡಿಯಲ್ಲಿ ಸೇನೆಯು 500 ಕೋಟಿ ರೂ. ಮೌಲ್ಯದ ಸೇನಾ ಉಪಕರಣಗಳನ್ನು ಖರೀದಿಸಬಹದಾಗಿದೆ.
ಇದನ್ನೂ ಓದಿ: ಸೇರಿಗೆ ಸವ್ವಾ ಸೇರು.. ಚೀನಾ ಮಣಿಸಲು ಭಾರತ ಸರ್ವ ರೀತಿಯಲ್ಲೂ ಸನ್ನದ್ಧ
2020ರ ಗಾಲ್ವಾನ್ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ನಡುವೆ ವೈರತ್ವ ಹೆಚ್ಚಿತು. ಭಾರತ-ಚೀನಾ ಗಡಿ ವಿವಾದ ಉಲ್ಬಣಗೊಂಡಿತು. ಅನೇಕ ಸುತ್ತಿನ ಮಾತುಕತೆಯ ಬಳಿಕ ಎರಡೂ ಕಡೆಯೂ ತಮ್ಮ ಸೈನಿಕರನ್ನು ಹಿಂಪಡೆಯುತ್ತಾ ಬಂದಿವೆ.
ಆದರೂ ಇದೀಗ ಚೀನಾ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯ ಉದ್ದಕ್ಕೂ ಭಾರೀ ಅಭ್ಯಾಸಗಳನ್ನು ನಡೆಸುತ್ತಿದೆ. ನಾವು ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಸಿದ್ಧರಿರುವುದಾಗಿ ಭಾರತೀಯ ಸೇನೆ ಈಗಾಗಲೇ ತಿಳಿಸಿದೆ.