ನವದೆಹಲಿ: ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ನಡೆಸುವ ಕಿತಾಪತಿ ತಡೆಯಲು ಭಾರತೀಯ ಸೇನೆಯು ವಾಸ್ತವಿಕ ನಿಯಂತ್ರಣ ರೇಖೆಯ ಬಳಿ (ಎಲ್‌ಎಸಿ) ತನ್ನ ಸೈನಿಕರನ್ನು ನಿಯೋಜಿಸಿದೆ. ಚಳಿಗಾಲ ಆರಂಭವಾಗಿದ್ದು, ಕೊರೆಯುವ ತಂಡಿಯಲ್ಲೂ ಸೈನಿಕರು ಗಡಿ ಕಾಯಲು ಅನುವಾಗುವಂತೆ ಚಿಕ್ಕ ಶೆಲ್ಟರ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಪೂರ್ವ ಲಡಾಖ್‌ನಲ್ಲಿ ಸೇನೆಗಾಗಿ ಇದುವರೆಗೆ 22 ಸಾವಿರ ಶೆಲ್ಟರ್ಗಳನ್ನು(ಚಿಕ್ಕಮನೆ) ನಿರ್ಮಾಣ ಮಾಡಲಾಗಿದೆ. ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆ ಸ್ಥಳಾಂತರಿಸಲು ಅನುವಾಗುವಂತೆ ನಿರ್ಮಿಸಲಾಗಿದೆ. ಯುದ್ಧ ಟ್ಯಾಂಕರ್ಗಳು, ಆರ್ಟಿಲರಿ ಗನ್‌ಗಳು ಮತ್ತು ಶಸ್ತ್ರಸಜ್ಜಿತ ಸೈನ್ಯ ಅತ್ಯಂತ ಶೀತ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.
ಶುದ್ಧ ನೀರಿಗಾಗಿ ಕೊಳ ನಿರ್ಮಾಣ: ಚಳಿಗಾಲದಲ್ಲಿ ನೀರು ಮಂಜುಗಡ್ಡೆಯಾಗಿ ಪರಿವರ್ತನೆಯಾಗಲಿದ್ದು, ಕಾರ್ಯನಿರತ ಸೈನಿಕರಿಗೆ ಶುದ್ಧ ನೀರಿನ ಸಮಸ್ಯೆ ಉಂಟಾಗದಿರಲು ಕೊಳಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನಿಯೋಜಿಸಲಾದ ಸೇನಾಪಡೆಗಳ ನೀರಿನ ಅಗತ್ಯತೆ ಪೂರೈಸಲು ನೀರಿನ ಹೊಂಡಗಳನ್ನು ಡಿಬಿಒದಂತ(ದೌಲತ್ ಬೇಗ್ ಓಲ್ಡಿ) ಶೀತ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದಲೇ ನೀರು ಬಳಕೆ ಮಾಡಲಾಗುತ್ತದೆ ಎಂದು ಸೇನೆಯ ಇಂಜಿನಿಯರ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಹೇಳಿದರು.
ತೀವ್ರ ಚಳಿಯಿಂದ ಕೊಳದ ನೀರು ಮೇಲ್ಭಾಗದಲ್ಲಿ ಗಡ್ಡೆಕಟ್ಟುತ್ತದೆ. ಆದರೆ, ಕೆಳಭಾಗದಲ್ಲಿ ದ್ರವ ರೂಪದಲ್ಲಿ ಉಳಿಯುತ್ತದೆ. ನಮ್ಮ ಸೈನಿಕರು ಈ ಕೊಳಗಳ ನೀರನ್ನು ಬಳಸಿಕೊಳ್ಳಲಿವೆ ಎಂದು ಹೇಳಿದರು. ಡಿಬಿಒ ಲಡಾಖ್‌ನ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ತಾಪಮಾನವು ಮೈನಸ್ 40 ಡಿಗ್ರಿ ಇರುತ್ತದೆ. ಕುಡಿಯುವ ನೀರು ಮತ್ತು ಆಹಾರವನ್ನು ಒದಗಿಸುವುದು ದೊಡ್ಡ ಸವಾಲಾಗಿದೆ.
ಓದಿ: ಶ್ರದ್ಧಾಳನ್ನು ಕೊಂದು ಮುಖ ಸುಟ್ಟು ವಿರೂಪಗೊಳಿಸಿದ್ದ ಪಾತಕಿ ಅಫ್ತಾಬ್!