ಕೋಲ್ಕತಾ (ಪಶ್ಚಿಮ ಬಂಗಾಳ): ನಮ್ಮ ಸಶಸ್ತ್ರ ಪಡೆಗಳು ಭಾರತದ ಭೂ, ಜಲ, ಆಕಾಶದ ಗಡಿಗಳನ್ನು ರಕ್ಷಿಸಲು ಎಲ್ಲ ರೀತಿಯ ಸಿದ್ಧತೆಯನ್ನು ನಡೆಸಿದೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್(ಸಿಡಿಸಿ) ಬಿಪಿನ್ ರಾವತ್ ಸೋಮವಾರ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್ ಬಿಲ್ಡರ್ ಅಂಡ್ ಇಂಜಿನಿಯರ್ಸ್ (ಜಿಆರ್ಎಸ್ಇ) ನಿರ್ಮಿಸುತ್ತಿರುವ ಫ್ರಿಗೇಟ್ ಯುದ್ಧನೌಕೆ-17ನ ನೂತನ ಯೋಜನೆ ಉದ್ಘಾಟನೆ ವೇಳೆ ಮಾತನಾಡಿದ ರಾವತ್ ಎರಡೂ ರಾಷ್ಟ್ರಗಳ ಸಮನ್ವತೆಯನ್ನು ಬದಲಾಯಿಸಲು ಚೀನಾ ಪ್ರಯತ್ನಿಸುತ್ತಿದೆ. ಇದನ್ನು ತಡೆಯಲು ಭಾರತದ ಪಡೆಗಳು ಸಿದ್ಧವಾಗಿವೆ ಎಂದಿದ್ದಾರೆ.
ಇದನ್ನೂ ಓದಿ: ಬ್ರಹ್ಮಪುತ್ರನಿಗೆ ಚೀನಾ ಅಣೆಕಟ್ಟು ನಿರ್ಮಿಸೋದು ಸುಲಭವಾ..?: ಇಲ್ಲಿದೆ ಪೂರ್ಣ ಮಾಹಿತಿ
ಕೊರೊನಾ ಸೋಂಕು ಇದ್ದರೂ ಭೂಸೇನೆ, ವಾಯುಸೇನೆ, ನೌಕಾಸೇನೆಗಳು ಉನ್ನತ ಮಟ್ಟದ ತಯಾರಿ ನಡೆಸಿವೆ ಎಂದು ಬಿಪಿನ್ ರಾವತ್ ಮೂರು ಪಡೆಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಕೇಂದ್ರ ಸರ್ಕಾರವು ತನ್ನ ನೀತಿಗಳ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಉತ್ತೇಜಿಸುತ್ತಿದೆ. ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವುದರೊಂದಿಗೆ ಭಾರತೀಯ ಸಂಸ್ಥೆಗಳು ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಆತ್ಮನಿರ್ಭರ ಭಾರತ್ ಕೂಡಾ ಕೇಂದ್ರ ಸರ್ಕಾರದ ದೂರದೃಷ್ಟಿಯಾಗಿದೆ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.