ಕಾಸರಗೋಡು, ಕೇರಳ: ಭಾರತೀಯ-ಅಮೆರಿಕನ್ ಪ್ರಜಾಪ್ರಭುತ್ವವಾದಿ ಜೂಲಿ ಎ ಮ್ಯಾಥ್ಯೂ ಅವರು ಟೆಕ್ಸಾಸ್‌ನ ಫೋರ್ಟ್ ಬೆಂಡ್ ಕೌಂಟಿಯಲ್ಲಿ ಸತತ ಎರಡನೇ ಅವಧಿಗೆ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೇರಳದ ತಿರುವಲ್ಲಾ ಮೂಲದ ಮ್ಯಾಥ್ಯೂ ಅವರು ಕಾಸರಗೋಡಿನ ಭೀಮಾನಡಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಅವರು ಮುಂದಿನ ನಾಲ್ಕು ವರ್ಷಗಳ ಅವಧಿಗೆ ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಲಯದ ನಂಬರ್ 3ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಾರೆ. ಮರು - ಚುನಾವಣೆಗೆ ಸ್ಪರ್ಧಿಸಿದ ಅವರು ರಿಪಬ್ಲಿಕನ್ ಆಂಡ್ರ್ಯೂ ಡಾರ್ನ್‌ಬರ್ಗ್ ಅವರನ್ನು ಸೋಲಿಸಿ 1,23,116 ಮತಗಳೊಂದಿಗೆ ಭರ್ಜರಿಯಾಗಿ ಗೆದ್ದರು.
ಈ ಪ್ರಯಾಣದಲ್ಲಿ ಪ್ರತಿ ಬೆಂಬಲಿಗರು ಮತ್ತು ಮತದಾರರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಚುನಾವಣೆಯಲ್ಲಿ ಗೆದ್ದ ನಂತರ ಫೇಸ್‌ಬುಕ್ ಪೋಸ್ಟ್ ಮೂಲಕ ಮ್ಯಾಥ್ಯೂ ಈ ಮಾತು ಹೇಳಿದ್ದಾರೆ. 2018ರ ಚುನಾವಣೆಯಲ್ಲಿ ಮ್ಯಾಥ್ಯೂ ಅವರು ರಿಪಬ್ಲಿಕನ್ ಟ್ರಿಸಿಯಾ ಕ್ರೆನೆಕ್ ವಿರುದ್ಧ ಪ್ರಭಾವಶಾಲಿ ಶೇ 8.24ರಷ್ಟು ಮತಗಳ ಅಂತರದಿಂದ ಗೆದ್ದಿದ್ದರು. ಆಗ ಅಮೆರಿಕ ಬೆಂಚ್‌ಗೆ ಆಯ್ಕೆಯಾದ ಮೊದಲ ಭಾರತೀಯ - ಅಮೆರಿಕನ್ ಮಹಿಳೆ ಎಂಬ ಇತಿಹಾಸವನ್ನು ನಿರ್ಮಿಸಿದರು.
ಸಾಮೂಹಿಕ ದೌರ್ಜನ್ಯ, ಸಿವಿಲ್ ದಾವೆ, ಪ್ರೊಬೇಟ್ ಮತ್ತು ಕ್ರಿಮಿನಲ್ ವಿಷಯಗಳಲ್ಲಿ 15 ವರ್ಷಗಳ ಕಾಲ ಅನುಭವ ಹೊಂದಿರುವ ಮ್ಯಾಥ್ಯೂ ಅವರು ಬಾಲಾಪರಾಧಿ ಮತ್ತು ಮಾನಸಿಕ ಆರೋಗ್ಯ ನ್ಯಾಯಾಲಯದ ಮುಖ್ಯಸ್ಥರಾಗಿದ್ದಾರೆ. ನ್ಯಾಯಾಧೀಶ ಮ್ಯಾಥ್ಯೂಸ್ ಫಿಲಡೆಲ್ಫಿಯಾದಲ್ಲಿ ಬೆಳೆದಿದ್ದಾರೆ. ಅವರ ಜ್ಯೂರಿಸ್ ಡಾಕ್ಟರೇಟ್‌ಗಾಗಿ ಡೆಲವೇರ್ ಲಾ ಸ್ಕೂಲ್ ಸೇರುವ ಮುನ್ನ ಪೆನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ್ದರು. ಜನವರಿ 2021 ರಲ್ಲಿ ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಯುವಜನರಿಗೆ ಸಹಾಯ ಮಾಡಲು ಜುವೆನೆಲ್ ಇಂಟರ್ವೆನ್ಷನ್ ಮತ್ತು ಮಾನಸಿಕ ಆರೋಗ್ಯ ನ್ಯಾಯಾಲಯವನ್ನು ಸ್ಥಾಪಿಸಿದ್ದರು.
ಫೋರ್ಟ್ ಬೆಂಡ್ನಲ್ಲಿ ಮಲಯಾಳಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಫೋರ್ಟ್ ಬೆಂಡ್ ಕೌಂಟಿ ನಿವಾಸಿಗಳಲ್ಲಿ ಶೇ 28.6 ರಷ್ಟು ಜನ ವಿದೇಶಿ ಮೂಲದವರಾಗಿದ್ದಾರೆ. ಇಲ್ಲಿ 51 ಪ್ರತಿಶತದಷ್ಟು ಏಷ್ಯನ್ - ಅಮೆರಿಕನ್ನರು ವಾಸಿಸುತ್ತಿದ್ದಾರೆ. ಟೆಕ್ಸಾಸ್ ರಾಜ್ಯದಲ್ಲಿ ನವೆಂಬರ್ 8, 2022 ರ ಮಧ್ಯಂತರದಲ್ಲಿ ಹೆಚ್ಚಿನ ಭಾರತೀಯ-ಅಮೆರಿಕನ್ನರು ನ್ಯಾಯಾಂಗ ಸ್ಥಾನಗಳ ರೇಸ್‌ನಲ್ಲಿದ್ದರು. ಮ್ಯಾಥ್ಯೂ ಅವರಲ್ಲದೇ ಇತರ ಇಬ್ಬರು ಪ್ರಜಾಪ್ರಭುತ್ವವಾದಿಗಳಾದ ನ್ಯಾಯಮೂರ್ತಿ ಕೆ.ಪಿ. ಜಾರ್ಜ್ ಮತ್ತು ಸೋನಿಯಾ ರಾಶ್ ಫೋರ್ಟ್ ಬೆಂಡ್ ಕೌಂಟಿಯಿಂದ ಮರು ಆಯ್ಕೆಯಾಗಿದ್ದಾರೆ.
ಓದಿ: ಮೆಕ್ಸಿಕೊ ಗಡಿ ಜೈಲಿನ ಮೇಲೆ ಗುಂಡಿನ ದಾಳಿ: 10 ಗಾರ್ಡ್ಸ್, ನಾಲ್ವರು ಕೈದಿಗಳ ಹತ್ಯೆ