ನವದೆಹಲಿ: 1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಐಸಿ-814 ಹೈಜಾಕ್ ಮಾಡಿದ್ದ ಹಾಗೂ ಪ್ರಯಾಣಿಕನಾಗಿದ್ದ ರೂಪಿನ್ ಕತ್ಯಾಲ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಯನ್ನು ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮಿಸ್ತ್ರಿ ಜಹೂರ್ ಇಬ್ರಾಹಿಂ ಕೊಲೆಯಾದವನಾಗಿದ್ದು, ಭಾರತೀಯ ಗುಪ್ತಚರ ಅಧಿಕಾರಿಗಳ ಮಾಹಿತಿಯಂತೆ ಈತ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಭಯೋತ್ಪಾದಕ. ಕರಾಚಿಯಲ್ಲಿ ಉದ್ಯಮವೊಂದರಲ್ಲಿ ತೊಡಗಿಕೊಂಡಿದ್ದನು.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ನಿಗೂಢ ಸ್ಫೋಟ: ಓರ್ವ ಸಾವು, 14 ಮಂದಿಗೆ ಗಾಯ
ಭಾರತದಲ್ಲಿನ ಅಧಿಕಾರಿಗಳೂ ಈ ಬಗ್ಗೆ ಮಾಹಿತಿ ನೀಡಿದ್ದು, ಕೊಲ್ಲಲ್ಪಟ್ಟ ವ್ಯಕ್ತಿ ಭಯೋತ್ಪಾದಕ ಇಬ್ರಾಹಿಂ ಆಗಿದ್ದಾನೆ. ಈತ ಕರಾಚಿಯ ಅಖ್ತರ್ ಕಾಲೋನಿಯಲ್ಲಿ ಕ್ರೆಸೆಂಟ್ ಫರ್ನಿಚರ್ಸ್ ಎಂಬ ಅಂಗಡಿ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ.
ವಿಮಾನ ಹೈಜಾಕ್ ಪ್ರಕರಣ: ಜೈಷ್-ಎ-ಮೊಹಮದ್ ಭಯೋತ್ಪಾದಕ ಸಂಘಟನೆ ಭಾರತದಲ್ಲಿನ ಭಯೋತ್ಪಾದಕರ ಬಿಡುಗಡೆಗೆ ಒತ್ತಾಯಿಸಲು ವಿಮಾನ ಹೈಜಾಕ್ ಮಾಡಲು ಪ್ಲ್ಯಾನ್ ಮಾಡಿತ್ತು. ಈ ಪ್ಲ್ಯಾನ್ಗೆ ಡಾಕ್ಟರ್ ಎಂಬ ಕೋಡ್‌ನೇಮ್ ಇಟ್ಟುಕೊಳ್ಳಲಾಗಿತ್ತು. ಅದರಂತೆ ಡಿಸೆಂಬರ್ 24, 1999ರಲ್ಲಿ 15 ಮಂದಿ ಸಿಬ್ಬಂದಿ 176 ಪ್ರಯಾಣಿಕರಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ ಐಸಿ-814 ಅನ್ನು ಐವರು ಭಯೋತ್ಪಾದಕರು ನೇಪಾಳದಿಂದ ಅಪಹರಿಸಿದ್ದರು.
ಅಮೃತಸರ ಮತ್ತು ಲಾಹೋರ್ ಮೇಲೆ ದುಬೈ ತೆರಳಿದ ವಿಮಾನ ಅಂತಿಮವಾಗಿ ತಾಲಿಬಾನ್ ನಿಯಂತ್ರಣದಲ್ಲಿದ್ದ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿದಿತ್ತು. ಈ ಭಯೋತ್ಪಾದಕರು ಭಾರತದಲ್ಲಿದ್ದ ಕೆಲವು ಭಯೋತ್ಪಾದಕರನ್ನು ಬಿಡುಗಡೆ ಮಾಡಲು ಒತ್ತಾಯಿಸಿದ್ದರು. ಡಿಸೆಂಬರ್ 31, 1999ರಂದು ಭಾರತ ಸರ್ಕಾರ ಮತ್ತು ಭಯೋತ್ಪಾದಕ ಸಂಘಟನೆಯಿಂದ ಆದ ಒಪ್ಪಂದದ ಪ್ರಕಾರ ಭಾರತದ ಜೈಲುಗಳಿಂದ ಮಸೂದ್ ಅಜರ್, ಒಮರ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅನ್ನು ಬಿಡುಗಡೆ ಮಾಡಿ, ವಿಮಾನದಲ್ಲಿದ್ದವರನ್ನು ರಕ್ಷಿಸಲಾಗಿತ್ತು. ಈ ಪ್ರಕರಣದಲ್ಲಿ ಮಿಸ್ತ್ರಿ ಜಹೂರ್ ಇಬ್ರಾಹಿಂ ಕೂಡಾ ಭಾಗಿಯಾಗಿದ್ದನು.