ಗ್ವಾಲಿಯರ್(ಮಧ್ಯ ಪ್ರದೇಶ): ರಾಜ್ಯದ ಹಲವೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಪ್ರವಾಹ ಪರಿಸ್ಥಿತಿಯ ಶಿವಪುರಿ, ಶಿಯೋಪುರ್, ಗ್ವಾಲಿಯರ್‌ನಲ್ಲಿ ಜನ ತತ್ತರಿಸಿದ್ದಾರೆ. ಸುಮಾರು 24 ಗಂಟೆಗಳ ಕಾಲ ಮರದ ಮೇಲೆ ಸಿಲುಕಿದ್ದ ಮೂವರು ಮತ್ತು ಐವರನ್ನು ಮಂಗಳವಾರ ಮಧ್ಯಪ್ರದೇಶದ ಪ್ರವಾಹ ಪೀಡಿತ ಶಿವಪುರಿ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವಾಯುಪಡೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಗ್ವಾಲಿಯರ್-ಚಂಬಲ್ ಪ್ರದೇಶದ 1,171 ಹಳ್ಳಿಗಳು ನಲುಗಿ ಹೋಗಿವೆ. ಶಿವಪುರಿ, ಶಿಯೋಪುರ್, ಗ್ವಾಲಿಯರ್ ಮತ್ತು ಡಾಟಿಯಾ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಕರೆಸಿಕೊಳ್ಳಲಾಗಿದೆ ಎಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜೇಶ್ ರಾಜೋರಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ ಎಲ್ಲಾ ಸಹಾಯದ ಭರವಸೆಯನ್ನು ಪ್ರಧಾನಿ ಅವರು ನೀಡಿದ್ದಾರೆ. ಶಿವಪುರಿಯ ಪ್ರವಾಹ ಪೀಡಿತ ಪಿಪ್ರೌಧ ಗ್ರಾಮದಲ್ಲಿ ಬೆಳಗ್ಗೆ 5 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 48 ಗಂಟೆಗಳಿಂದ ಗ್ವಾಲಿಯರ್ ಚಂಬಲ್ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಗ್ರಾಮಸ್ಥರ ಸಂಕಷ್ಟ ಹೆಚ್ಚಿಸಿದೆ. ಮೊರೆನಾ ಜಿಲ್ಲೆಯಲ್ಲಿ ಕ್ವಾರಿ ನದಿಯು ಉಕ್ಕಿ ಹರಿಯುತ್ತಿದೆ. ಈ ಪ್ರದೇಶದಲ್ಲಿ ಪ್ರವಾಹದಂತಹ ಪರಿಸ್ಥಿತಿ ಈಗ ಸಾವಿಗೆ ಕಾರಣವಾಗಿದೆ. ಸಿವಿಲ್ ಲೈನ್ ಪೊಲೀಸ್ ಠಾಣೆ ಪ್ರದೇಶದ ಕುನ್ವಾರಿ ಗ್ರಾಮದ ಯುವಕ ಸ್ಪೇಟ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.