ನವದೆಹಲಿ: ಮುಂಬರುವ ಐದು ವರ್ಷಗಳಲ್ಲಿ ಭಾರತವು ಆಟೋಮೊಬೈಲ್ ಉತ್ಪಾದನಾ ಕೇಂದ್ರದ ಹಬ್(ಪ್ರಮುಖ ಸ್ಥಳ) ಆಗಿ ಬದಲಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದಿದ್ದಾರೆ.
"ಬಹುತೇಕ ಎಲ್ಲಾ ಪ್ರತಿಷ್ಠಿತ ಆಟೋಮೊಬೈಲ್ ಬ್ರಾಂಡ್‌ಗಳು ಭಾರತದಲ್ಲಿ ಇರುತ್ತವೆ. ಎಥೆನಾಲ್, ಮೆಥನಾಲ್, ಬಯೋ-ಡೀಸೆಲ್, ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ), ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ), ವಿದ್ಯುತ್ ಮತ್ತು ಗ್ರೀನ್ ಹೈಡ್ರೋಜನ್ ಒಳಗೊಂಡ ತಂತ್ರಜ್ಞಾನಗಳಲ್ಲಿ ನಾವು ಕೆಲಸ ಮಾಡುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಭಾರತವು ಆಟೋಮೊಬೈಲ್ ಉತ್ಪಾದನಾ ಕೇಂದ್ರದ ಹಬ್ ಆಗಿ ಬದಲಾಗುತ್ತದೆ" ಎಂದರು.
ಹೊಸ ನೀತಿಯಡಿ ಹಳೆ ವಾಹನಗಳನ್ನು ಗುಜರಿ ಮಾಡುವುದನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡಲಾಗುವುದು. ಇದರಲ್ಲಿ ಮರುಬಳಕೆ ಅಂಶವನ್ನು ಹೆಚ್ಚು ಕೇಂದ್ರೀಕರಿಸಲಾಗುತ್ತದೆ. ಜನರಿಗೆ ಪ್ರಕ್ರಿಯೆಗಳು ಸುಲಭವಾಗಿ ಸಿಗುವಂತಾಗಲು ಆರ್ಟಿಒ ವ್ಯವಸ್ಥೆಯನ್ನು ಸಹ ಸರಳಗೊಳಿಸಿ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Automobile Scrappage Policy, ಹೊಸ ಕಾರು ಖರೀದಿದಾರರಿಗೆ ಅನುಕೂಲ: ಮೋದಿ
ಹೊಸ ಗುಜರಿ ನೀತಿಯು ದೇಶದಲ್ಲಿ 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಸಚಿವ ಗಡ್ಕರಿ ಇದೇ ವೇಳೆ ಹೇಳಿದರು.
ವಾಹನ ಸ್ಕ್ರ್ಯಾಪೇಜ್ ನೀತಿ ಕುರಿತು ಮಾತನಾಡುತ್ತಾ, "ಈ ನೀತಿಯ ಪ್ರಕಾರ ವೈಯಕ್ತಿಕ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ 25 ಪ್ರತಿಶತ ಮತ್ತು ವಾಣಿಜ್ಯ ವಾಹನಗಳಿಗೆ 15 ಪ್ರತಿಶತದಷ್ಟು ಕಡಿತ ಮಾಡಲಾಗಿದೆ. ಕೆಲವು ಪ್ರತಿಪಕ್ಷ ಆಡಳಿತದಲ್ಲಿರುವ ರಾಜ್ಯಗಳಿಂದ ಈ ನೀತಿಯ ವಿರುದ್ಧ ಪ್ರಶ್ನೆಗಳು ಬರಬಹುದು. ಆದರೆ ರಾಜ್ಯವು ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಕೇಂದ್ರವು ನಿರ್ದೇಶಿಸಲು ಸಾಧ್ಯವಿಲ್ಲ" ಎಂದು ಹೇಳಿದರು.