ಮುಂಬೈ: ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಎನ್ಡಿಎ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಐಎನ್ಡಿಐಎಯ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಸೆಪ್ಟೆಂಬರ್ 1 ರಂದು ಎರಡೂ ಮೈತ್ರಿಕೂಟಗಳು ಮಹಾರಾಷ್ಟ್ರದ ಮುಂಬೈನಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಸಜ್ಜಾಗಿವೆ.
ಐಎನ್ಡಿಐಎ ಮೈತ್ರಿಕೂಟದ ಸದಸ್ಯರು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಜಂಟಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿ ಕಾರ್ಯತಂತ್ರ ಮತ್ತು ರಾಜ್ಯಗಳಲ್ಲಿ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಲಿದೆ. INDIA ಮೈತ್ರಿಕೂಟದ ಹೊಸ ಲೋಗೋ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ NDA ಮೈತ್ರಿಕೂಟದ ಹೊಸ ಪಾಲುದಾರ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಕೂಡ ಮುಂಬೈನಲ್ಲಿ ಇದೇ ದಿನಾಂಕದಂದು ಸಭೆ ಸೇರಲಿದೆ. ಅಜಿತ್ ಪವಾರ್ ಬಣವನ್ನು ಪ್ರತಿನಿಧಿಸುವ ಎನ್‌ಸಿಪಿ ಸಂಸದ ಸುನಿಲ್ ತಟ್ಕರೆ,"ಈ ಸಭೆಯಲ್ಲಿ ನಮ್ಮ ಎಲ್ಲ ರಾಜ್ಯ ಸರ್ಕಾರದ ಮೈತ್ರಿ ಪಾಲುದಾರರಾದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ) ಮತ್ತು ಎನ್‌ಸಿಪಿ (ಅಜಿತ್ ಪವಾರ್) ಭಾಗವಹಿಸಲಿದ್ದಾರೆ" ಎಂದು ಹೇಳಿದ್ದಾರೆ.
ಎರಡೂ ಒಕ್ಕೂಟದ ಸಭೆ ಒಂದೇ ದಿನ ನಡೆಯುತ್ತಿರುವುದರ ಬಗ್ಗೆ ಮಾತನಾಡಿದ ಸುನೀಲ್,"ನಮ್ಮ ಸಭೆಯನ್ನು ನಮ್ಮ ಸಮನ್ವಯ ಸಮಿತಿ ಕಳೆದ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೂ ಮೊದಲೇ ಯೋಜಿಸಲಾಗಿತ್ತು. ಅದೇ ದಿನ ವಿರೋಧ ಪಕ್ಷಗಳೂ ಸಭೆ ನಡೆಸುತ್ತಿವೆ" ಎಂದಿದ್ದಾರೆ.
INDIA ಲೋಗೋ ಅನಾವರಣ: ಐಎನ್ಡಿಐಎ ಸಭೆಗೆ ಸುಮಾರು 26 ರಿಂದ 27 ಮೈತ್ರಿ ಪಕ್ಷಗಳು ಬರಲಿವೆ ಎಂದು ಹಿರಿಯ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಚೌಹಾಣ್ ಮಾಹಿತಿ ನೀಡಿದ್ದಾರೆ. "ಆಗಸ್ಟ್ 31 ರಂದು ಸಂಜೆ ಮುಂಬೈನಲ್ಲಿ ಅನೌಪಚಾರಿಕ ಸಭೆ ಮತ್ತು ಸೆಪ್ಟೆಂಬರ್ 1 ರಂದು ಔಪಚಾರಿಕ ಸಭೆ ನಡೆಯಲಿದೆ. ಇಲ್ಲಿಯವರೆಗೆ, ಎರಡು ಸಭೆಗಳನ್ನು ಆಯೋಜಿಸಲಾಗಿದೆ. ಆದ್ದರಿಂದ ಈ ಮೂರನೇ ಸಭೆಯಲ್ಲಿ, ಮುಂದಿನ ಕಾರ್ಯಸೂಚಿಯನ್ನು ಚರ್ಚಿಸಲಾಗುವುದು. ಲೋಗೋವನ್ನು ಆಗಸ್ಟ್ 31 ರಂದು ಅನಾವರಣಗೊಳ್ಳಬಹುದು"ಎಂದು ಅಶೋಕ್ ತಿಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್, ಮೈತ್ರಿಕೂಟಕ್ಕೆ ಇನ್ನಷ್ಟು ಪಕ್ಷಗಳು ಸೇರಲಿವೆ ಎಂದು ಸುಳಿವು ನೀಡಿದ್ದರು. "ನಾವು 2024 ರ ಲೋಕಸಭೆ ಚುನಾವಣೆಗೆ ಐಎನ್ಡಿಐಎ ಮೈತ್ರಿಯ ಕಾರ್ಯತಂತ್ರವನ್ನು ಮುಂಬೈನಲ್ಲಿ ಚರ್ಚಿಸುತ್ತೇವೆ. ಸೀಟು ಹಂಚಿಕೆ ಮತ್ತು ಇತರ ವಿಷಯಗಳು ಸಭೆಯ ನಮ್ಮ ಕಾರ್ಯಸೂಚಿಯಲ್ಲಿವೆ. ಇನ್ನೂ ಕೆಲವು ರಾಜಕೀಯ ಪಕ್ಷಗಳು ನಮ್ಮ ಒಕ್ಕೂಟಕ್ಕೆ ಸೇರುತ್ತವೆ. ನಾನು ಗರಿಷ್ಠ ಸಂಖ್ಯೆಯ ಪಕ್ಷಗಳನ್ನು ಒಗ್ಗೂಡಿಸಲು ಬಯಸುತ್ತೇನೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ''ಎಂದಿದ್ದಾರೆ. (ಎಎನ್ಐ)
ಇದನ್ನೂ ಓದಿ: ಲೋಕಸಭಾ ಚುನಾವಣೆ: ಸೋನಿಯಾ ಗಾಂಧಿ ವಿರುದ್ದ ಬಿಜೆಪಿಯಿಂದ ಈ ನಾಯಕಿ ಕಣಕ್ಕೆ?