ನವದೆಹಲಿ: ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವು 16 ಶತಕೋಟಿ ಡಾಲರ್‌ನಿಂದ 149 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
17ನೇ ಇಂಡೋ- ಯುಎಸ್ ಆರ್ಥಿಕ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಉಭಯ ದೇಶಗಳ ನಡುವಿನ ವ್ಯಾಪಾರವು 2025ರ ವೇಳೆಗೆ 500 ಬಿಲಿಯನ್ ಡಾಲರ್ ತಲುಪುತ್ತದೆ. ಕೋವಿಡ್ ನಂತರದಲ್ಲಿ ನಾವು ಚೇತರಿಕೆ ಕಾಣುತ್ತಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೋವಿಡ್ ನಂತರದ ಆರ್ಥಿಕ ಚೇತರಿಕೆಯಲ್ಲಿ ಭಾರತ ಮತ್ತು ಯುಎಸ್ ಪ್ರಮುಖ ಪಾತ್ರ ವಹಿಸಿಕೊಳ್ಳುತ್ತಿವೆ ಎಂದು ನಾನು ಬಲವಾಗಿ ನಂಬುತ್ತೇನೆ. 1920ರ ದಶಕದಲ್ಲಿ ನಡೆದಿದ್ದ ಜಾಗತಿಕ ಹಣಕಾಸು ಮುಗ್ಗಟ್ಟು ಮನುಕುಲ ಎದುರಿಸಿದ್ದ ಅತಿ ದೊಡ್ದ ಆರ್ಥಿಕ ಮುಗ್ಗಟ್ಟು ಆಗಿತ್ತು ಎಂದು ಗಡ್ಕರಿ ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ನಿಂದ ಮತ್ತಷ್ಟು ಚೇತರಿಕೆಗಾಗಿ ಹೊಸ ಆಲೋಚನಾ ಪ್ರಕ್ರಿಯೆ ನಮಗೆ ಅಗತ್ಯವಿದೆ. ಭಾರತದಲ್ಲಿ ಕೋವಿಡ್ ತಡೆಯಲು, ಕೋವಿಡ್ ಮುಕ್ತ ಭಾರತ ಸೃಷ್ಟಿಸಲು ವಿಶ್ವದ ಅತಿ ದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.
ಅಮೆರಿಕದ ಉದ್ಯಮಿಗಳು ಭಾರತದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ರಸ್ತೆ, ಹೆದ್ದಾರಿ ಯೋಜನೆಗಳ ಹೂಡಿಕೆಯಲ್ಲೂ ಅವರ ಪಾಲು ಅಧಿಕವಿದೆ. ರಸ್ತೆ ಮೂಲಸೌಕರ್ಯ ವಿಭಾಗದಲ್ಲಿ ಅವರಿಗೆ ಅದ್ಭುತ ಅವಕಾಶವಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆ, ಲವ್ ಜಿಹಾದ್ ಬಗ್ಗೆ ಕೇರಳ ಸಿಎಂ ಮೌನ: ಆಕ್ರೋಶ ಹೊರಹಾಕಿದ ಬಿಜೆಪಿ