ನವದೆಹಲಿ: ಜನರಿಕ್ ಆವೃತ್ತಿಯ ಮೊಲ್ನುಪಿರವಿರ್ ತಯಾರಿಸಲು ಮತ್ತು ಮಾರುಕಟ್ಟೆಗೆ ತರಲು ದೇಶದ ಹಲವಾರು ಔಷಧೀಯ ಕಂಪನಿಗಳಿಗೆ ಡ್ರಗ್ ಕಂಟ್ರೋಲರ್ ತುರ್ತು ಬಳಕೆಯ ಅಧಿಕಾರ ನೀಡಿದೆ. ಇದರಿಂದ ಭಾರತ ದೇಶವು ಕೋವಿಡ್ -19 ಆ್ಯಂಟಿವೈರಲ್ ಸಾಮಾನ್ಯ ಔಷಧ ಉತ್ಪಾದನೆಯ ಮೂಲಕ ಅತಿದೊಡ್ಡ ಜಾಗತಿಕ ಕೇಂದ್ರವಾಗಲಿದೆ ಎಂದು ಫಿಚ್ ಸೊಲ್ಯೂಷನ್ಸ್ ತಿಳಿಸಿದೆ.
ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಮೊಲ್ನುಪಿರವಿರ್‌ನಿಂದ ಆಸ್ಪತ್ರೆಗೆ ದಾಖಲಾಗುವವರು ಹಾಗೂ ಸಾವುಗಳ ಮಟ್ಟ ತಗ್ಗಿಸಲು ನೆರವಾಗುತ್ತದೆ ಎಂದು ಫಿಚ್ ತಿಳಿಸಿದೆ.
ಲಾಗೆವ್ರಿಯೊ (ಮೊಲ್ನುಪಿರವಿರ್) ಅನ್ನು ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪೋಟಿಕ್ಸ್ ಅಭಿವೃದ್ಧಿಪಡಿಸಿದ್ದು, ಸೌಮ್ಯ ಕೋವಿಡ್ ಸೋಂಕು ಹೊಂದಿರುವ ವಯಸ್ಕರಿಗೆ ಚಿಕಿತ್ಸೆ ನೀಡಲು ಇದು ಮೊದಲ ಮೌಖಿಕ ಆಂಟಿವೈರಲ್ ಔಷಧವಾಗಿದೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ಅನುಮತಿ ಪಡೆದಿರುವ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್, ಸಿಪ್ಲಾ, ಸನ್ ಫಾರ್ಮಾ, ನ್ಯಾಟ್ಕೋ ಫಾರ್ಮಾ, ವಿಯಾಟ್ರಿಸ್, ಹೆಟೆರೊ ಡ್ರಗ್ಸ್ ಮತ್ತು ಮ್ಯಾನ್‌ಕೈಂಡ್ ಫಾರ್ಮಾ ಮೊಲ್ನುಪಿರವಿರ್ ಮಾತ್ರಗಳನ್ನು ಶೀಘ್ರದಲ್ಲಿ ಮಾರುಕಟ್ಟೆಗೆ ತರಲಿವೆ.
ಉಳಿದ ಸಂಸ್ಥೆಗಳು ಕೂಡ ಇಂತಹ ಪ್ರಯತ್ನದಲ್ಲಿದ್ದು, ಇದು ಕೋವಿಡ್ -19 ಆ್ಯಂಟಿವೈರಲ್ ಜನರಿಕ್ ಔಷಧ ಉತ್ಪಾದನೆಗೆ ಭಾರತವನ್ನು ಅತಿದೊಡ್ಡ ಜಾಗತಿಕ ಹಬ್ ಆಗಿ ಮಾಡುತ್ತದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಹೆಚ್ಚು ಒಮಿಕ್ರಾನ್ ಇರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೂರನೇ ಸ್ಥಾನ.. ಪ್ರಕರಣಗಳ ಸಂಖ್ಯೆ 333ಕ್ಕೆ ಏರಿಕೆ!