ನವದೆಹಲಿ: ಕೊರೊನಾ ಎರಡನೇ ಅಲೆಯ ಕರಾಳ ರೂಪವನ್ನು ಕಂಡ ಭಾರತ ಸಾವು-ನೋವಿನಲ್ಲಿ ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಆಘಾತಕಾರಿ ಸುದ್ದಿ ಹೊರ ಬಂದಿದೆ. ಬುಧವಾರ ಒಂದೇ ದಿನದಲ್ಲಿ ಬರೋಬ್ಬರಿ 6,148 ಮಂದಿ ವೈರಸ್ನಿಂದಾಗಿ ಉಸಿರು ನಿಲ್ಲಿಸಿದ್ದಾರೆ. ಇಡೀ ವಿಶ್ವದ ಯಾವುದೇ ಕೋವಿಡ್ ಪೀಡಿತ ದೇಶಗಳು ಸಹ ದಿನವೊಂದರಲ್ಲಿ ಮೂರು ಸಾವಿರ ಸಾವಿನ ಸಂಖ್ಯೆ ಗಡಿ ಕೂಡ ತಲುಪಿರಲಿಲ್ಲ. ಈ ದಾಖಲೆಯನ್ನು ನಾಲ್ಕು ಸಾವಿರ ಸಾವಿನೊಂದಿಗೆ ಕಳೆದ ತಿಂಗಳೇ ಮುರಿದಿದ್ದ ಭಾರತ ಇದೀಗ ಆರು ಸಾವಿರ ಜನರ ಬಲಿಯೊಂದಿಗೆ ಭೂಮಂಡಲವನ್ನೇ ನಲುಗಿಸಿದೆ.
ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮೃತರ ಸಂಖ್ಯೆ ಹೆಚ್ಚಳವಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ 94,052 ಕೇಸ್ಗಳು ಪತ್ತೆಯಾಗಿದ್ದು, 1,51,367 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ದೇಶದಲ್ಲೀಗ ಕೋವಿಡ್ ಪ್ರಕರಣಗಳ ಸಂಖ್ಯೆ 2,91,83,121, ಸಾವಿನ ಸಂಖ್ಯೆ 3,59,676ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆ 2,76,55,493ಕ್ಕೆ ಹೆಚ್ಚಳವಾಗಿದ್ದು, 11,67,952 ಕೇಸ್ಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಮರಣ ಪ್ರಮಾಣ ಮುಚ್ಚಿಟ್ಟಿತ್ತಾ ಬಿಹಾರ?
ಈ ಹಿಂದೆ ತಮ್ಮ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 5,500 ಎಂದಿದ್ದ ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಇದೀಗ ದಿಢೀರನೆ 9,429 ಎಂದು ಹೇಳುತ್ತಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಒಂದೇ ಬಾರಿಗೆ ಶೇ.72ರಷ್ಟು ಹೆಚ್ಚು ಸಾವಿನ ಸಂಖ್ಯೆ ಏರಿಕೆಯಾಗಿದೆ. ಒಬ್ಬ ಸೋಂಕಿತ ಇನ್ನಾವುದೇ ಜಿಲ್ಲೆಯಲ್ಲಿ ಸತ್ತು ಅಲ್ಲಿ ಆತನ ಅಂತ್ಯಕ್ರಿಯೆ ಮಾಡಲಾಗಿರುತ್ತದೆ. ತನ್ನದೇ ಜಿಲ್ಲೆಯಲ್ಲಿ ಮೃತಪಟ್ಟ ಸೋಂಕಿತರ ಅಂಕಿಅಂಶಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು ಎಂಬ ಉಡಾಫೆ ಉತ್ತರವನ್ನ ಬಿಹಾರ ಆರೋಗ್ಯ ಇಲಾಖೆ ನೀಡಿದೆ.
23.90 ಕೋಟಿ ಡೋಸ್ ವ್ಯಾಕ್ಸಿನೇಷನ್
ಇನ್ನು ಲಸಿಕೆಯ ವಿಚಾರಕ್ಕೆ ಬಂದರೆ, ದೇಶಾದ್ಯಂತ ಈವರೆಗೆ ಕೋವಿಡ್ ಲಸಿಕೆಯ 23,90,58,360 ಡೋಸ್ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ ಸುಮಾರು 18 ಕೋಟಿ ಮಂದಿ ಮೊದಲ ಡೋಸ್ ಮಾತ್ರ ಪಡೆದಿದ್ದು, ಉಳಿದವರು ಎರಡೂ ಡೋಸ್ಗಳನ್ನು ಹಾಕಿಸಿಕೊಂಡಿದ್ದಾರೆ.