ನವದೆಹಲಿ: ಮೂರು ಲಕ್ಷಕ್ಕೂ ಅಧಿಕ (3,14,835) ಪ್ರಕರಣಗಳೊಂದಿಗೆ ದಿನವೊಂದರಲ್ಲಿ ಪ್ರಪಂಚದಲ್ಲೇ ಅತೀ ಹೆಚ್ಚು ಸೋಂಕಿತರು ಭಾರತದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಅಮೆರಿಕ ಸೇರಿದಂತೆ ವಿಶ್ವದ ಯಾವ ಕೋವಿಡ್ ಪೀಡಿತ ದೇಶಗಳಲ್ಲಿಯೂ ಇಷ್ಟೊಂದು ಕೇಸ್ಗಳು ಒಂದೇ ದಿನದಲ್ಲಿ ವರದಿಯಾಗಿರಲಿಲ್ಲ.
ಇಲ್ಲಿಯವರೆಗೆ ದೇಶದಲ್ಲಿ ಅತೀ ಹೆಚ್ಚು ಸಾವು ಕೂಡ ಬುಧವಾರ ಸಂಭವಿಸಿದ್ದು, 2,104 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲೀಗ ಸೋಂಕಿತರ ಸಂಖ್ಯೆ 3,14,835 ಹಾಗೂ ಮೃತರ ಸಂಖ್ಯೆ 1,84,657ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,91,428ಕ್ಕೆ ಜಿಗಿದಿದೆ.
24 ಗಂಟೆಗಳಲ್ಲಿ 1,78,841 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1,34,54,880 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
13.23 ಮಂದಿಗೆ ಲಸಿಕೆ
ಕೊರೊನಾ ಲಸಿಕಾಭಿಯಾನದಡಿಯಲ್ಲಿ ಜನವರಿ 16ರಿಂದ ಈವರೆಗೆ ಒಟ್ಟು 13,23,30,644 ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಮೇ 1ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗುತ್ತಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.