ನವದೆಹಲಿ : ಕಳೆದ ಎರಡು ದಿನಗಳಿಂದ ಹೊಸ ಕೋವಿಡ್ ಸೋಂಕುಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಇಳಿಕೆ ಕಾಣುತ್ತಿತ್ತು. ಆದರೆ ಕಳೆದ 24 ಗಂಟೆಯಲ್ಲಿ ಭಾರೀ ಏರಿಕೆ ಕಂಡಿದೆ. ಇಂದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,927 ಹೊಸ ಪ್ರಕರಣಗಳು ದಾಖಲೆಯಾಗಿವೆ. ಕೊರೊನಾ ಪಾಸಿಟಿವ್ ದರವು ಶೇ 0.58ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.
ನಿನ್ನೆಗೆ ಹೋಲಿಸಿದರೆ ದೇಶದಲ್ಲಿ ಇಂದು ಒಟ್ಟು 450ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗಿವೆ. ದೇಶದಲ್ಲಿ ಸೋಮವಾರ 2,483 ಕೋವಿಡ್ ಪ್ರಕರಣ ಪತ್ತೆಯಾಗಿದ್ದವು. ಸದ್ಯದ ಮಟ್ಟಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 16,279 ರಷ್ಟಿವೆ ಎಂದು ತಿಳಿದು ಬಂದಿದೆ.
ಓದಿ: ಇಳಿಕೆಯತ್ತ ಕೋವಿಡ್ ಪ್ರಕರಣ.. ಇಂದು ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ
ಕಳೆದ 24 ಗಂಟೆಗಳಲ್ಲಿ ಒಟ್ಟು 2,252 ಕೋವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಒಟ್ಟು ಚೇತರಿಕೆಯ ಸಂಖ್ಯೆ 4,25,25,563ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ. 98.75 ರಷ್ಟಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆಯ ಡೋಸ್ಗಳ ಸಂಖ್ಯೆ 188.19 ಕೋಟಿ ಆಗಿದೆ.
ನಿನ್ನೆ ಒಂದೇ ದಿನಕ್ಕೆ ಸುಮಾರು 32 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 5,26,654ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆ ಮೂಲಕ ತಿಳಿದುಬಂದಿದೆ.