ನವದೆಹಲಿ: ಅನೇಕ ರಾಜ್ಯಗಳಲ್ಲಿನ ಲಾಕ್ಡೌನ್ ಹಾಗೂ ಕಠಿಣ ನಿರ್ಬಂಧಗಳ ಫಲವಾಗಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಹೊಸ ಕೋವಿಡ್ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚು ವರದಿಯಾಗುತ್ತಿದೆ. ಭೀಕರ ಅವಸ್ಥೆಗೆ ಒಳಗಾಗಿದ್ದ ಭಾರತದ ಆರೋಗ್ಯ ಕ್ಷೇತ್ರ ಕೂಡ ವಿದೇಶಗಳ ನೆರವಿನಿಂದ ಸುಧಾರಿಸಿಕೊಂಡಿದ್ದು, ಕೊರೊನಾಗೆ ಬಲಿಯಾಗುವವರ ಸಂಖ್ಯೆ ನಿಧಾನವಾಗಿ ಇಳಿಕೆಯಾಗುತ್ತಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,65,553 ಕೇಸ್ಗಳು ಪತ್ತೆಯಾಗಿದ್ದು, 3,460 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಶನಿವಾರ ಒಂದೇ ದಿನದಲ್ಲಿ 2,76,309 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕೋವಿಡ್ನಿಂದ ಅನಾಥರಾದ ಮಕ್ಳಳಿಗೆ ಬಾಲ ಸೇವಾ ಯೋಜನೆ ಘೋಷಿಸಿದ ಸಿಎಂ
ಭಾರತದಲ್ಲೀಗ ಸೋಂಕಿತರ ಸಂಖ್ಯೆ 2,78,94,800 ಹಾಗೂ ಮೃತರ ಸಂಖ್ಯೆ 3,25,972ಕ್ಕೆ ಏರಿಕೆಯಾಗಿದೆ. 2,54,54,320 ಮಂದಿ ಈವರೆಗೆ ವೈರಸ್ನಿಂದ ಚೇತರಿಸಿಕೊಂಡಿದ್ದು, ಗುಣಮುಖರ ಪ್ರಮಾಣ ಶೇ. 91ಕ್ಕೆ ಏರಿಕೆಯಾಗಿದೆ.
21.20 ಕೋಟಿ ಜನರಿಗೆ ವ್ಯಾಕ್ಸಿನ್
ಜನವರಿ 16ರಿಂದ ನಿನ್ನೆಯವರೆಗೆ ದೇಶಾದ್ಯಂತ 21,20,66,614 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಅಮೆರಿಕದ ಬಳಿಕ 20 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡಿದ ದೇಶ ಭಾರತವಾಗಿದೆ.