ನವದೆಹಲಿ: 231 ದಿನಗಳ ಬಳಿಕ ದಿನವೊಂದರಲ್ಲಿ ಅತಿ ಕಡಿಮೆ ಹೊಸ ಕೋವಿಡ್ ಸೋಂಕು ಕೇಸ್ಗಳು ವರದಿಯಾಗಿವೆ. ಅಂದರೆ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 13,058 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಕೇಸ್ಗಳ ಸಂಖ್ಯೆ 3,40,94,373ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ 164 ಮಂದಿಯನ್ನು ಕೊರೊನಾ ವೈರಸ್ ಬಲಿ ಪಡೆದುಕೊಂಡಿದೆ. ಈವರೆಗೆ ದೇಶದಲ್ಲಿ ಒಟ್ಟು 4,52,454 ಜನರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಪೈಕಿ 3,34,58,801 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 2020ರ ಮಾರ್ಚ್ ಬಳಿಕ ಗುಣಮುಖರ ಪ್ರಮಾಣ ಶೇ.98.14ಕ್ಕೆ ಹೆಚ್ಚಳವಾಗಿದೆ.
ಕೇರಳದ್ದೇ ಸಿಂಹಪಾಲು
ಕಳೆದ ಕೆಲ ದಿನಗಳಿಂದ ದೇಶದಲ್ಲಿ ವರದಿಯಾಗುತ್ತಿರುವ ಕೋವಿಡ್ ಸಾವು-ನೋವಿನಲ್ಲಿ ಕೇರಳದ್ದೇ ಸಿಂಹಪಾಲಿದೆ. ನಿನ್ನೆ ಕೂಡ ದೇಶದಲ್ಲಿ ಪತ್ತೆಯಾದ 13,058 ಕೇಸ್ಗಳ ಪೈಕಿ ಕೇರಳದಲ್ಲೇ 6,676 ಪ್ರಕರಣ ವರದಿಯಾಗಿದ್ದು, 164 ಮಂದಿ ಮೃತರ ಪೈಕಿ 60 ಸೋಂಕಿತರು ಈ ರಾಜ್ಯದಲ್ಲಿ ಬಲಿಯಾಗಿದ್ದಾರೆ.
ಇನ್ನು 227 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ಗಳ ಪ್ರಮಾಣ ಶೇ.0.54ಕ್ಕೆ ಇಳಿಕೆ ಕಂಡಿದ್ದು, ಸದ್ಯ 1,83,118 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
98.67 ಕೋಟಿ ಡೋಸ್ ವ್ಯಾಕ್ಸಿನೇಷನ್
ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 98,67,69,411 ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ನಿನ್ನೆ ಒಂದೇ ದಿನ 87 ಲಕ್ಷ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.