ನವದೆಹಲಿ: ಭಾರತದಲ್ಲಿ ಕೋವಿಡ್ ಕೇಸ್ಗಳ ಸಂಖ್ಯೆ 1,04,79,179ಕ್ಕೆ ಹಾಗೂ ಮೃತರ ಸಂಖ್ಯೆ 1,51,327ಕ್ಕೆ ಏರಿಕೆಯಾಗಿದೆ. ಆದರೆ, ಕೊರೊನಾ ಪೀಡಿತ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಹಾಗೂ ಮಿಲಿಯನ್ ಜನಸಂಖ್ಯೆಗೆ ಪತ್ತೆಯಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ.
ಈ ಹಿಂದೆ ದಿನನಿತ್ಯ ಸಾವಿರಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದರು, ಲಕ್ಷ ಸನಿಹ ಕೇಸ್ಗಳು ವರದಿಯಾಗುತ್ತಿತ್ತು. ಆದರೆ, ಸೋಮವಾರ ಅತಿ ಕಡಿಮೆ ಅಂದರೆ 12,584 ಸೋಂಕಿತರು ಪತ್ತೆಯಾಗಿದ್ದು, 167 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಪುಣೆ ವಿಮಾನ ನಿಲ್ದಾಣದಿಂದ ಕೋವಿಶೀಲ್ಡ್ ಲಸಿಕೆ ರವಾನೆ: ದೆಹಲಿ ತಲುಪಿದ ವ್ಯಾಕ್ಸಿನ್
ಇನ್ನು ಒಟ್ಟು ಸೋಂಕಿತರ ಪೈಕಿ 1,01,11,294 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 2,16,558 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜನವರಿ 11ರ ವರೆಗೆ 18,26,52,88 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,97,056 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಜನವರಿ 16 ರಿಂದ ದೇಶಾದ್ಯಂತ ಕೊರೊನಾ ಲಸಿಕೆ ವಿತರಿಸುವುದಾಗಿ ಭಾರತ ಸರ್ಕಾರ ತಿಳಿಸಿದ್ದು, ಇಂದು ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಗಳನ್ನು ಪುಣೆಯಿಂದ ದೆಹಲಿ, ಅಹಮದಾಬಾದ್, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಢ ಮತ್ತು ಭುವನೇಶ್ವರಕ್ಕೆ ಸಾಗಾಟ ಮಾಡಲಾಗುತ್ತಿದೆ.