ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪವನ್ನು ಭಾರತ ತಿರಸ್ಕರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಎಲ್ಲಾ ಆರೋಪಗಳು ಅಸಂಬದ್ಧ ಮತ್ತು ಪ್ರಚೋದಿತ. ಕೆನಡಾ ಸಂಸತ್ತಿನಲ್ಲಿ ಪ್ರಧಾನಿ ಟ್ರುಡೊ ಭಾರತದ ವಿರುದ್ಧ ನೀಡಿರುವ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಆರೋಪಗಳನ್ನು ಭಾರತ ತಿರಸ್ಕರಿಸುತ್ತದೆ ಎಂದು ತಿಳಿಸಿದೆ.
ಕೆನಡಾದಲ್ಲಿನ ಹಿಂಸಾಚಾರದಲ್ಲಿ ಭಾರತ ಸರ್ಕಾರ ಭಾಗಿಯಾಗಿರುವ ಆರೋಪ ಅಸಂಬದ್ಧ. ಇದು ಯಾವುದೋ ಪ್ರೇರಣೆಯಿಂದ ಕೂಡಿದೆ. ಎಲ್ಲಾ ಆರೋಪಗಳನ್ನೂ ತಿರಸ್ಕರಿಸಲಾಗಿದೆ. ಭಾರತ ಕಾನೂನು ಸುವ್ಯವಸ್ಥೆಯ ಮೇಲೆ ಬದ್ಧತೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ. ಇಂತಹ ಆಧಾರರಹಿತ ಆರೋಪಗಳು ಖಲಿಸ್ತಾನಿ ಭಯೋತ್ಪಾದಕರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ.
ಕೆನಡಾದಲ್ಲಿ ಆಶ್ರಯ ಪಡೆದಿರುವ ಖಲಿಸ್ತಾನಿ ಉಗ್ರಗಾಮಿಗಳು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕುತ್ತಿದ್ದಾರೆ. ಈ ವಿಷಯದಲ್ಲಿ ಕೆನಡಾ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಪ್ರಶ್ನಾತೀತ. ಕೆನಡಾದಲ್ಲಿ ಕೊಲೆಗಳು, ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳು ಸೇರಿದಂತೆ ಹಲವಾರು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇಂತಹ ಚಟುವಟಿಕೆಗಳಿಗೆ ಭಾರತದ ಹೆಸರನ್ನು ಜೋಡಿಸುವುದನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಕೆನಡಾದಲ್ಲಿದ್ದುಕೊಂಡು ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಕೆನಡಾದಲ್ಲಿ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಜಸ್ಟಿನ್ ಟ್ರುಡೊ ಸೋಮವಾರ ಆರೋಪಿಸಿದ್ದಾರೆ. ಉಗ್ರ ನಿಜ್ಜರ್ನನ್ನು ಕೆನಡಾದ ಸರ್ರೆ ಗುರುದ್ವಾರದ ಹೊರಗೆ ಜು.18ರಂದು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಪಂಜಾಬ್‌ನ ಜಲಂಧರ್‌ನ ಭರ್ಸಿಂಗ್‌ಪುರ ಗ್ರಾಮದವರಾದ ನಿಜ್ಜರ್ ಸರ್ರೆಯಲ್ಲಿ ನೆಲೆಸಿದ್ದ. ಸೋಮವಾರ ಕೆನಡಾದ ಸಂಸತ್ತಿನಲ್ಲಿನ ಚರ್ಚೆಯಲ್ಲಿ ಟ್ರುಡೊ ಮಾತನಾಡುತ್ತಾ, ಕೆನಡಾ ಪ್ರಜೆಯ ಹತ್ಯೆಯನ್ನು ಭಾರತ ಸರ್ಕಾರದ ಏಜೆಂಟ್ ನಡೆಸಿದ್ದಾರೆ ಎಂದು ನಂಬಲು ಕಾರಣಗಳಿವೆ ಎಂದು ಕೆನಡಾ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿದ್ದರು.
ಇದನ್ನೂ ಓದಿ: ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣ: ಭಾರತದ ರಾಜತಾಂತ್ರಿಕ ಅಧಿಕಾರಿ ಉಚ್ಛಾಟಿಸಿದ ಕೆನಡಾ