ನವದೆಹಲಿ: ಎಬೋಲಾ, ಜಿಕಾ, ನಿಫಾ ಮತ್ತು ಸಾರ್ಸ್ ಮಾದರಿಯಲ್ಲಿ ಅಪಾಯಕಾರಿ ಕೊರೊನಾ ಮಹಾಮಾರಿ ಜಗತ್ತನ್ನು ಕಾಡುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಜಗತ್ತಿನಾದ್ಯಂತ ಸಾಮಾಜಿಕ-ಆರ್ಥಿಕ ವಿನಾಶ ಉಂಟುಮಾಡಿದೆ.
ಕೋವಿಡ್ ಹತ್ತಿಕ್ಕಲು ಒಂದೇ ಒಂದು ಉಪಾಯ ಅದು ಲಸಿಕೆ. 'ಟೀಕಾಕರಣ'ದಿಂದ ಮಾತ್ರ ಮಹಾಮಾರಿಯನ್ನು ಸದೆ ಬಡೆಯಬಹುದು ಎಂಬುದು ಹಲವು ತಜ್ಞರ ಅಭಿಪ್ರಾಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸುವ ಬಗ್ಗೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ತಿಳಿಸಿತ್ತು. ಈ ಬೆನ್ನಲ್ಲೇ ಭಾರತವು ವ್ಯಾಕ್ಸಿನೇಷನ್ ಪ್ರಮಾಣದಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ.
ಭಾರತದಲ್ಲಿ ಈಗ ಕಳೆದೊಂದು ವಾರದಿಂದ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ಭಾರಿ ವೇಗ ಸಿಕ್ಕಿದೆ. ಕೇವಲ ಒಂದೇ ವಾರದಲ್ಲಿ ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ಬರೆದಿದೆ. ದೇಶ ಇದೀಗ ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಘಟ್ಟವನ್ನು ಪ್ರವೇಶಿಸಿದೆ. ಇದು ಲಸಿಕೀಕರಣದ ಘಟ್ಟ. ವಿಶ್ವದ ಬೃಹತ್ ಲಸಿಕಾ ಅಭಿಯಾನ ನಡೆಸಿದ ಭಾರತ ಇದೀಗ ಜಗತ್ತಿನ ದೊಡ್ಡಣ್ಣನನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಕೋವಿಡ್-19 ವ್ಯಾಕ್ಸಿನೇಷನ್‌ನಲ್ಲಿ ಭಾರತವು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಭಾರತ ಇದುವರೆಗೆ 32,36,63,297 ಡೋಸ್ ಲಸಿಕೆ ನೀಡಿದ್ದರೆ, ಯುಎಸ್ 33,33,27,328 ಡೋಸ್‌ಗಳನ್ನು ನೀಡಿದೆ.
ಇದನ್ನೂ ಓದಿ: ಕೋವಿಶೀಲ್ಡ್ , ಕೋವ್ಯಾಕ್ಸಿನ್‌ನ 44 ಕೋಟಿ ಡೋಸ್‌ಗಳಿಗೆ ಆರ್ಡರ್ ಮಾಡಿದ ಕೇಂದ್ರ !
ಮೊದಲ ಹಂತದಲ್ಲಿ, ಲಸಿಕೆ ವಿತರಣೆಯನ್ನು ಕೇಂದ್ರ ಸರ್ಕಾರವು ಕೇವಲ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಯೋಧರಿಗೆ ಮಾತ್ರ ಸೀಮಿತಗೊಳಿಸಿತ್ತು. ಬಳಿಕ ಒಂದೊಂದೇ ರಂಗಕ್ಕೆ ಇದನ್ನು ವಿಸ್ತರಿಸುತ್ತ ಸಾಗಿ ಇದೀಗ ದೇಶದ ಮನೆ ಮನೆಗೆ ಲಸಿಕೆ ಕೊಂಡೊಯ್ಯುವ ಚಿಂತನೆಯತ್ತ ಸಾಗುತ್ತಿದೆ. ಜಾಗತಿಕ ಆರೋಗ್ಯವು ಎದುರಿಸುತ್ತಿರುವ ಹತ್ತು ದೊಡ್ಡ ಸವಾಲುಗಳಲ್ಲಿ ಲಸಿಕೆ ಹಿಂಜರಿಕೆ ಕೂಡಾ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಕಳವಳ ವ್ಯಕ್ತಪಡಿಸಿರುವ ಈ ಸಂದರ್ಭದಲ್ಲಿಯೂ ಭಾರತ ಮಾತ್ರ ದಾಖಲೆಯ ಮೊತ್ತದಲ್ಲಿ ವ್ಯಾಕ್ಸಿನೇಷನ್ ನಡೆಸುತ್ತಿದೆ.
ಒಂದೇ ಸಮಯದಲ್ಲಿ ದೇಶದ 138 ಕೋಟಿ ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ಅಸಾಧ್ಯ. ಹೀಗಾಗಿ ಕೇಂದ್ರ ಸರ್ಕಾರವು ಲಸಿಕೆ ಅಭಿಯಾನವನ್ನು ಹಂತ ಹಂತವಾಗಿ ಯೋಜಿಸಿತು. ಲಸಿಕೆ ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕು ಹಾಗೂ ಈ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಒಳಗೊಂಡಿರಬೇಕು. ಕೋವಿಡ್ ಲಸಿಕೆ ಪ್ರತಿಯೊಬ್ಬ ನಾಗರಿಕರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಯಿಡುತ್ತ ಸಾಗಿತು. ಆದರೆ ಈ ಮಧ್ಯೆ ಮತ್ತೊಂದು ಸವಾಲು ಎದುರಾಯಿತು ಅದೇ ಕಾಳಸಂತೆಯಲ್ಲಿ ಲಸಿಕೆ ಮಾರಾಟ. ಇದನ್ನು ಸಹ ಸಮರ್ಥವಾಗಿ ಎದುರಿಸಿ, ಲಸಿಕಾಕರಣದಲ್ಲಿ ಹೊಸ ದಾಖಲೆ ಬರೆದಿದೆ.
ಇದನ್ನೂ ಓದಿ: COVID Vaccine: ಲಸಿಕೆ ಪಡೆದ ಶೇ.92ರಷ್ಟು ಆರೋಗ್ಯ ಕಾರ್ಯಕರ್ತರು ಸೋಂಕು ತಗುಲಿದರೂ ಸುರಕ್ಷಿತ
ಭಾರತದಲ್ಲಿ ಏಪ್ರಿಲ್ 3-9ರ ವರೆಗೆ 2.47 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಇದಾದ ಬಳಿಕ ಜೂನ್ 12-18ರ ವೇಳೆ 2.12 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಈಗ ಅದರ ಎರಡು ಪಟ್ಟು ಲಸಿಕೆಯನ್ನು ಜನರಿಗೆ ನೀಡಿರುವುದು ವಿಶೇಷ. ದೇಶದಲ್ಲಿ ಮೇ 15-21ರ ಅವಧಿಯಲ್ಲಿ 92 ಲಕ್ಷ ಡೋಸ್ ಲಸಿಕೆ ನೀಡಿದ್ದೇ ಕನಿಷ್ಠ ಸಾಧನೆಯಾಗಿದೆ.
ಪ್ರಸ್ತುತ ಭಾರತದಲ್ಲಿ ಸೀರಂ ಇನ್ಸ್‌ಟಿಟ್ಯೂಟ್ ತಯಾರಿಸುತ್ತಿರುವ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಹಾಗೂ ರಷ್ಯಾ ಮೂಲದ ಸ್ಪುಟ್ನಿಕ್-ವಿ ಲಸಿಕೆಗೆ ಅನುಮತಿ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಆರೋಗ್ಯವಂತರಿಗೆ ಲಸಿಕೆ ನೀಡಲಾಗುತ್ತಿದ್ದು, ಶೀಘ್ರವೇ 12 ರಿಂದ 18 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ನೀಡಲು ಸಹ ಚಿಂತನೆ ನಡೆದಿದೆ.
ಮಕ್ಕಳಿಗೆ ಲಸಿಕೆ ನೀಡುವುದರ ಕುರಿತಂಥೆ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಅವರು, 12 ರಿಂದ 18 ವರ್ಷದ ಮಕ್ಕಳ ಸಂಖ್ಯೆ ಸುಮಾರು 13 ರಿಂದ 14 ಕೋಟಿ ಇದ್ದು, ಇವರಿಗೆ ನೀಡಲು 25-26 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ. ಸದ್ಯ, ಕೊವ್ಯಾಕ್ಸಿನ್ ಮತ್ತು ಜೈಡುಸ್ ಕ್ಯಾಡಿಲಾ ಸಂಸ್ಥೆಯ ಲಸಿಕೆಗಳನ್ನು ಮಾತ್ರವೇ ಮಕ್ಕಳ ಮೇಲೆ ಪ್ರಯೋಗಕ್ಕೆ ಬಳಸಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ‘ಕೋವಿಶೀಲ್ಡ್ ಡೋಸ್ಗಳ ನಡುವಿನ ಅಂತರ ಹೆಚ್ಚಿಸುವ ನಿರ್ಧಾರ ಮೂಲಭೂತ ವೈಜ್ಞಾನಿಕ ಕಾರಣಗಳನ್ನು ಆಧರಿಸಿದೆ’
ಕೇಂದ್ರ ಸರ್ಕಾರ ಜುಲೈ ಅಂತ್ಯಕ್ಕೆ 51.6 ಕೋಟಿ ಡೋಸ್ ಲಸಿಕೆ ನೀಡಬೇಕು ಎಂಬ ಗುರಿ ಹಾಕಿಕೊಂಡಿದೆ. ಜುಲೈ ತಿಂಗಳಿನಲ್ಲಿ ಪ್ರತಿ ನಿತ್ಯ ಸರಾಸರಿ 1 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಒಂದು ವಾರದಿಂದ ನಿತ್ಯ 50-60 ಲಕ್ಷ ಡೋಸ್ ಲಸಿಕೆ ನೀಡುತ್ತಿರುವುದರಿಂದ ಜುಲೈನಲ್ಲೂ ನಿತ್ಯ 1 ಕೋಟಿ ಡೋಸ್ ಲಸಿಕೆ ನೀಡುವ ವಿಶ್ವಾಸ ಮೂಡಿದೆ.