ಕೊಚ್ಚಿ (ಕೇರಳ): ಲಕ್ಷದ್ವೀಪದ ಕಲ್ಪೇನಿ ದ್ವೀಪದಿಂದ 75 ವರ್ಷದ ಕೊರೊನಾ ಸೋಂಕಿತನನ್ನು ವಿಮಾನಯಾನದ ಮೂಲಕ ಚಿಕಿತ್ಸೆಗೆಂದು ಕೊಚ್ಚಿಗೆ ಕರೆತರಲಾಗಿದೆ.
ಸದರ್ನ್ ನೇವಲ್ ಕಮಾಂಡ್‌ನ ಅಧಿಕೃತ ಹೇಳಿಕೆಯ ಪ್ರಕಾರ, ಕುತ್ತಿಗೆ ಭಾಗದಲ್ಲಿ ಎಲುಬು ಮುರಿತಕ್ಕೊಳಗಾಗಿ ಬಳಲುತ್ತಿರುವ ರೋಗಿಯನ್ನು ಲಕ್ಷದ್ವೀಪ ಆಡಳಿತದ ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಮೂಲಕ ಬುಧವಾರ ಕೊಚ್ಚಿಗೆ ಕರೆತಂದು ಬಳಿಕ ಐಎನ್‌ಹೆಚ್ಎಸ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಯುಟಿಎಲ್ ಆಡಳಿತದ ಕೋರಿಕೆಯ ಮೇರೆಗೆ ಸದರ್ನ್ ನೇವಲ್ ಕಮಾಂಡ್ ಒಪ್ಪಿದಂತೆ ರೋಗಿಗೆ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ. ಲಕ್ಷದ್ವೀಪ ಆಡಳಿತದಿಂದ ಕೊರೊನಾ ಸೋಂಕಿತರ ಚಿಕಿತ್ಸೆಗೆಂದು ಹತ್ತು ಬೆಡ್ಗಳ ಸೌಲಭ್ಯವನ್ನು ನೌಕಾ ಆಸ್ಪತ್ರೆ ಕಾಯ್ದಿರಿಸಿದೆ" ಎಂದು ತಿಳಿದು ಬಂದಿದೆ.
ಈ ಮಧ್ಯೆ, ಭಾರತೀಯ ನೌಕಾಪಡೆಯ ಹಡಗು ಎಂಪಿವಿ ಮೇಘನಾ ಬುಧವಾರ ಮಧ್ಯಾಹ್ನ ಆಂಡ್ರೊತ್ ದ್ವೀಪಕ್ಕೆ 13 ಆಮ್ಲಜನಕ ಸಿಲಿಂಡರ್‌ಗಳನ್ನು ರವಾನೆ ಮಾಡಿದೆ. ನೇವಲ್ ಡಿಟ್ಯಾಚ್‌ಮೆಂಟ್ ನೌಕಾ ಅಧಿಕಾರಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.