ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪಮಟ್ಟದಲ್ಲಿ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 18,987 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಸೋಂಕಿತರ ಸಂಖ್ಯೆ 3,04,02,730ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಮಹಾಮಾರಿ ಸೋಂಕಿಗೆ ಬುಧವಾರ 246 ಮಂದಿ ಸಾವನ್ನಪ್ಪಿದ್ದಾರ. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 4,51,435 ತಲುಪಿದೆ. ಕಳೆದ 24 ಗಂಟೆಗಳಲ್ಲಿ 19,808 ಸೋಂಕಿತರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 3,33,62,709ಕ್ಕೆ ತಲುಪಿದೆ.
ಪ್ರಸ್ತುತ ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 98.07ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ 2,06,586 ಸಕ್ರಿಯ ಪ್ರಕರಣಗಳಿವೆ. ಕಳೆದ 215 ದಿನಗಳಿಗೆ ಹೋಲಿಸಿದರೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಶೇಕಡಾವಾರು ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡಾ 0.61ರಷ್ಟಿದೆ.
ಸೋಂಕು ಪರೀಕ್ಷೆ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಅಕ್ಟೋಬರ್ 13ರವರೆಗೆ ಒಟ್ಟು 58,76,64,525 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಬುಧವಾರ ಒಂದೇ ದಿನ 13,01,083 ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆ.
ಸೋಂಕು ಪರೀಕ್ಷಾ ಪ್ರಮಾಣವನ್ನು ದಿನದಿಂದ ದಿನಕ್ಕೆ ಏರಿಕೆ ಮಾಡಲಾಗುತ್ತಿದೆ. ನಡೆಸುತ್ತಿರುವ ಸೋಂಕು ಪರೀಕ್ಷೆಗಳಲ್ಲಿ ಶೇಕಡಾ 1.44ರಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸತತ 111 ದಿನಗಳ ಕಾಲ ದಿನವೊಂದಕ್ಕೆ ಸೋಂಕಿಗೆ ಒಳಗಾಗುವವರ ಪ್ರಮಾಣ ಶೇಕಡಾ 3ಕ್ಕಿಂತ ಕಡಿಮೆ ಇದೆ.
ಕೋವಿಡ್ ವ್ಯಾಕ್ಸಿನೇಷನ್: ಕಳೆದ 24 ಗಂಟೆಗಳಲ್ಲಿ 35,66,347 ಡೋಸ್ ಲಸಿಕೆಯನ್ನು ನೀಡಲಾಗಿದೆ. ಗುರುವಾರ ಬೆಳಗ್ಗೆ 7 ಗಂಟೆಯವರೆಗೆ 96.82 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಈವರೆಗೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 98.88 ಕೋಟಿ ಡೋಸ್ ಒದಗಿಸಲಾಗಿದೆ. ಇನ್ನೂ 8.89 ಕೋಟಿಗೂ ಹೆಚ್ಚು ಡೋಸ್ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಬಳಸಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇದನ್ನೂ ಓದಿ: ದುರ್ಗಾಪೂಜೆಯ ವೇಳೆ ಗುಂಡಿನ ದಾಳಿ: ಹಬ್ಬದ ಸಂಭ್ರಮದಲ್ಲಿದ್ದ ಓರ್ವ ಸಾವು, ಮೂವರಿಗೆ ಗಾಯ