ತಿರುವನಂತಪುರಂ: ದ್ವೀಪ ರಾಷ್ಟ್ರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ ಸಮಸ್ಯೆ ನಿವಾರಿಸಲು ಭಾರತ ನಿರಂತರವಾಗಿ ಸಹಾಯಹಸ್ತ ಚಾಚಿದ್ದು, ಈವರೆಗೆ 3.8 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಸಚಿವರು, ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲಿನ ಜನರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಮಗೆ ಅರಿವಿದೆ. ಈ ಸಂಕಷ್ಟದ ಹೊತ್ತಲ್ಲಿ ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೆರೆಹೊರೆಯವರ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಈ ವರ್ಷವೊಂದರಲ್ಲೇ ಶ್ರೀಲಂಕಾವನ್ನು ಬೆಂಬಲಿಸುವ ದೃಷ್ಟಿಯಿಂದ ನಾವು ಅವರಿಗೆ ಸುಮಾರು 3.8 ಶತಕೋಟಿ (US) ಡಾಲರ್ ಹಣಕಾಸು ಸಹಾಯ ಒದಗಿಸಿದ್ದೇವೆ. ಈ ಮೂಲಕ ದ್ವೀಪರಾಷ್ಟ್ರಕ್ಕೆ ದೊಡ್ಡ ಬೆಂಬಲಿಗರಾಗಿದ್ದೇವೆ. ಕಳೆದ ಹಲವಾರು ತಿಂಗಳುಗಳಿಂದ ಅಗತ್ಯ ವಸ್ತುಗಳ ಖರೀದಿ ಹಾಗೂ ಇಂಧನ ಖರೀದಿಸಲು ಭಾರತ ಸಾಲ ನೀಡಿದೆ. ಅಲ್ಲಿನ ಸಮಸ್ಯೆಗಳಿಗೆ ಅಲ್ಲಿಯೇ ಉತ್ತರವೂ ಇದೆ ಎಂದು ಅವರು ಅಭಿಪ್ರಾಯಪಟ್ಟರು.
22 ಮಿಲಿಯನ್ ಜನರಿರುವ ಶ್ರೀಲಂಕಾವು ಆರ್ಥಿಕ ಪ್ರಕ್ಷುಬ್ಧತೆಯ ವಾತಾವರಣದಲ್ಲಿದೆ. ವಿದೇಶಿ ವಿನಿಮಯದ ಕೊರತೆಯಿಂದ ತೀವ್ರ ದುರ್ಬಲಗೊಂಡಿದೆ. ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಅಗತ್ಯ ಆಮದುಗಳಿಗೆ ಹಣ ಪಾವತಿಸಲು ಹೆಣಗಾಡುತ್ತಿದೆ. ನಿನ್ನೆ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿದ ನೂರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಮಧ್ಯ ಕೊಲಂಬೊದ ಅವರ ನಿವಾಸಕ್ಕೆ ನುಗ್ಗಿ ರಾಶಿ ರಾಶಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ಪ್ರತಿಭಟನಾಕಾರರ ಮುತ್ತಿಗೆ, ರಾಜಪಕ್ಸ ಪತ್ತೆ ಇಲ್ಲ