ನವದೆಹಲಿ : ಕಕ್ಷೆಯಲ್ಲಿ ಭಾರತವು 103 ಸಕ್ರಿಯ ಮತ್ತು ನಿಷ್ಕ್ರಿಯ ಉಪಗ್ರಹಗಳನ್ನು ಹೊಂದಿದೆ. ಜತೆಗೆ 114 ವಸ್ತುಗಳನ್ನು ಉಪಗ್ರಹದ ಅವಶೇಷಗಳನ್ನು ಗುರುತಿಸಲಾಗಿದೆ. ಬಾಹ್ಯಾಕಾಶದಲ್ಲಿನ ಅವಶೇಷದ ತುಣುಕುಗಳನ್ನು ಕಡಿಮೆ ಮಾಡಲು ಸಂಶೋಧನೆ ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಮಾರ್ಚ್‌ನಲ್ಲಿ ನಾಸಾ ಹೊರಡಿಸಿದ ಆರ್ಬಿಟಲ್ ಡೆಬ್ರಿಸ್ ವರದಿ ಪ್ರಕಾರ, ಭಾರತದ ಸಕ್ರಿಯ ಮತ್ತು ನಿಷ್ಕ್ರಿಯ ಉಪಗ್ರಹಗಳು ಹಾಗೂ ಅವಶೇಷಗಳು ಸೇರಿ ಒಟ್ಟು 217 ಬಾಹ್ಯಾಕಾಶ ವಸ್ತುಗಳ ಕಕ್ಷೆಯಲ್ಲಿ ಸುತ್ತ ಸುತ್ತಿವೆ. ಕಕ್ಷೆಯಲ್ಲಿನ ಸಕ್ರಿಯ ಅವಶೇಷಗಳನ್ನು ಹೊರ ಹಾಕಲು ಅಗತ್ಯವಿರುವ ಕಾರ್ಯಕ್ಷಮತೆ ಮತ್ತು ಅದರ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಂಶೋಧನೆ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಬಾಹ್ಯಾಕಾಶದ ಅವಶೇಷಗಳು ಹೆಚ್ಚುತ್ತಿರುವ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧನಾ ಸಮುದಾಯವು ಆ್ಯಕ್ಟೀವ್ ಡೆಬ್ರಿಸ್ ರಿಮೂವಲ್ (ಎಡಿಆರ್) ಎಂಬ ತಂತ್ರಜ್ಞಾನವನ್ನು ಸೂಚಿಸಿದೆ. ಆದರೆ, ಅದು ಬಹಳ ಸಂಕೀರ್ಣ ತಂತ್ರಜ್ಞಾನವಾಗಿದೆ. ಜತೆಗೆ ನೀತಿ ನಿರ್ಧಾರಗಳು ಮತ್ತು ಕಾನೂನು ಸಮಸ್ಯೆಗಳನ್ನು ಇದು ಒಳಗೊಂಡಿದೆ. ಹೀಗಾಗಿ, ಭಾರತ ಸೇರಿದಂತೆ ಹಲವು ದೇಶಗಳು ಈ ತಂತ್ರಜ್ಞಾನ ಕುರಿತಂತೆ ಅಧ್ಯಯನ ನಡೆಸುತ್ತಿವೆ. ಅಲ್ಲದೇ, ಇದನ್ನು ಪ್ರಮಾಣೀಕರಿಸುವ ಮತ್ತು ಅಂತಿಮಗೊಳಿಸಲು ಅಧ್ಯಯನ ಸಹ ಆರಂಭವಾಗಿದೆ ಎಂದು ಹೇಳಿದ್ದಾರೆ.
ಇತ್ತ, ಬಾಹ್ಯಾಕಾಶದ ಅವಶೇಷಗಳನ್ನ ತಗ್ಗಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಸ್ವಯಂ ಆಗಿ ಕಣ್ಮರೆಯಾಗುವ ಉಪಗ್ರಹಗಳನ್ನು ಅಭಿವೃದ್ಧಿ ತಂತ್ರಜ್ಞಾನದಲ್ಲಿ ಇಸ್ರೋ ತೊಡಗಿದೆ ಎಂದು ಕಳೆದ ವರ್ಷ ಇಸ್ರೋದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದರು. ಇನ್ನು, ಅಮೆರಿಕ 4,144 ಸಕ್ರಿಯ ಮತ್ತು ನಿಷ್ಕ್ರಿಯ ಉಪಗ್ರಹಗಳು ಹಾಗೂ 5,126 ಅವಶೇಷಗಳು ಹೊಂದಿದೆ. ಚೀನಾವು 517 ಸಕ್ರಿಯ ಮತ್ತು ನಿಷ್ಕ್ರಿಯ ಉಪಗ್ರಹಗಳು, 3,854 ಅವಶೇಷಗಳ ವಸ್ತುಗಳು ಹೊಂದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಿರುಕುಳ ನೀಡಲು ಬಂದ್ರೆ 1000 ವೋಲ್ಟ್ ಶಾಕ್.. ಮಹಿಳೆಯರ ಸುರಕ್ಷತೆಗೆ ಸಾಧನ ಆವಿಷ್ಕರಿಸಿದ ಬಿ.ಕಾಂ ವಿದ್ಯಾರ್ಥಿನಿ