ನವದೆಹಲಿ : ಪರಸ್ಪರ ಸಹಕಾರ ಮತ್ತು ಎರಡೂ ದೇಶಗಳ ಗಡಿಯಲ್ಲಿನ ಜನರ ಹಿತರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಭಾರತವು 2018ರಿಂದ ಈವರೆಗೆ 577 ಬಾಂಗ್ಲಾದೇಶಿ ನುಸುಳುಕೋರರನ್ನು ಅವರ ದೇಶಕ್ಕೆ ಹಸ್ತಾಂತರಿಸಿದೆ. ಈ ವರ್ಷ ಹಸ್ತಾಂತರಿಸಲಾದ ನುಸುಳುಕೋರರ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಾಗಿದೆ. ಮೊದಲ ಐದು ತಿಂಗಳಲ್ಲಿ 100ಕ್ಕೂ ಹೆಚ್ಚು ಜನ ತಮ್ಮ ದೇಶಕ್ಕೆ ಮರಳಿದ್ದಾರೆ.
ಭಾರತದೊಂದಿಗೆ 4,096 ಕಿ.ಮೀ ಗಡಿ ಹಂಚಿಕೊಂಡಿರುವ ನೆರೆಯ ದೇಶದ ಗಡಿ ಕಾವಲು ಪಡೆ- ಬಾರ್ಡರ್ ಗಾರ್ಡ್ ಬಾಂಗ್ಲಾದೇಶಕ್ಕೆ (ಬಿಜಿಬಿ) ಈ ನುಸುಕೋರರನ್ನು ಹಸ್ತಾಂತರಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ-ಬಾಂಗ್ಲಾದೇಶದ ಗಡಿಯನ್ನು ಅತ್ಯಂತ ಶಾಂತಿಯುತ ಅಂತಾರಾಷ್ಟ್ರೀಯ ಗಡಿ ಎಂದು ಪರಿಗಣಿಸಲಾಗಿರುವುದರಿಂದ, ಎರಡೂ ದೇಶಗಳು ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಬಯಸುತ್ತವೆ. ಉಭಯ ರಾಷ್ಟ್ರಗಳ ಗಡಿ ಕಾವಲು ಪಡೆಗಳ ಧ್ವಜ ಸಭೆಗಳಲ್ಲಿ ಎರಡೂ ಕಡೆಗಳಿಂದ ಇಂಥ ಉತ್ತಮ ಇಚ್ಛಾಶಕ್ತಿಯನ್ನು ನಿರಂತರವಾಗಿ ತೋರುತ್ತ ಬರಲಾಗುತ್ತಿದೆ.
ಈಗ ಹಸ್ತಾಂತರಿಸಲಾಗಿರುವ 577 ನುಸುಳುಕೋರರ ಪೈಕಿ ಗಡಿ ಸಮೀಪದ ಹಳ್ಳಿಗಳ ಮಹಿಳೆಯರು, ಮಕ್ಕಳು ಮತ್ತು ಪುರುಷರು ಹೆಚ್ಚಾಗಿದ್ದಾರೆ. ಉದ್ಯೋಗದ ಹುಡುಕಾಟದಲ್ಲಿ ಇವರು ಹೆಚ್ಚಾಗಿ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತೀಯ ಭೂಪ್ರದೇಶಕ್ಕೆ ನುಸುಳಿದ್ದರು.
ವಿಶ್ವದ ಐದನೇ ಅತಿ ಉದ್ದದ ಭೂ ಗಡಿಯಾಗಿರುವ ಭಾರತ-ಬಾಂಗ್ಲಾದೇಶ ಗಡಿಯ ಹೆಚ್ಚಿನ ಭಾಗಗಳು ಈಗಲೂ ಬೇಲಿಯಿಲ್ಲದೆ ಮುಕ್ತವಾಗಿರುವುದರಿಂದ ಬಾಂಗ್ಲಾ ಗ್ರಾಮಸ್ಥರು ಭಾರತೀಯ ಭೂಪ್ರದೇಶಕ್ಕೆ ನುಸುಳಬಹುದು. ಭಾರತ-ಬಾಂಗ್ಲಾದೇಶ ಗಡಿಯು ಅಸ್ಸೋಂನಲ್ಲಿ 262 ಕಿ.ಮೀ, ತ್ರಿಪುರಾದಲ್ಲಿ 856 ಕಿ.ಮೀ, ಮಿಜೋರಾಂನಲ್ಲಿ 318 ಕಿ.ಮೀ, ಮೇಘಾಲಯದಲ್ಲಿ 443 ಕಿ.ಮೀ ಮತ್ತು ಪಶ್ಚಿಮ ಬಂಗಾಳದಲ್ಲಿ 2,217 ಕಿ.ಮೀ. ಉದ್ದವಿದೆ.
ಮಾಹಿತಿಯ ಪ್ರಕಾರ, ಭಾರತಕ್ಕೆ ಬಂದಿದ್ದ 577 ಜನರ ಪೈಕಿ 480 ಮಂದಿ ಪಶ್ಚಿಮ ಬಂಗಾಳದ ಮೂಲಕ, 71 ತ್ರಿಪುರದ ಮೂಲಕ, 18 ಮೇಘಾಲಯದ ಮೂಲಕ ಮತ್ತು ಎಂಟು ಮಂದಿ ಅಸ್ಸೋಂ ಮೂಲಕ ಪ್ರವೇಶಿಸಿದ್ದರು. ಎಲ್ಲಾ 577 ಬಾಂಗ್ಲಾದೇಶಿಯರನ್ನು ಜನವರಿ 1, 2018 ಮತ್ತು ಈ ವರ್ಷದ ಮೇ 21ರ ನಡುವೆ ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಾಯಿತು.
ಈ ವರ್ಷ ಮೇ 21ರವರೆಗೆ 129 ಬಾಂಗ್ಲಾದೇಶಿಯರನ್ನು ಬಿಎಸ್‌ಎಫ್ ಬಂಧಿಸಿದ್ದು, ಅವರನ್ನು ಸಹ ಬಾಂಗ್ಲಾ ಬಾರ್ಡರ್ ಗಾರ್ಡ್ಗೆ ಹಸ್ತಾಂತರಿಸಲಾಯಿತು. ಈ ಪೈಕಿ 116 ಮಂದಿ ಪಶ್ಚಿಮ ಬಂಗಾಳದ ಮೂಲಕ, ಒಂಬತ್ತು ಜನ ತ್ರಿಪುರ ಮೂಲಕ, ಮೂರು ಜನ ಮೇಘಾಲಯದ ಮೂಲಕ ಮತ್ತು ಓರ್ವ ಅಸ್ಸೋಂ ಮೂಲಕ ಪ್ರವೇಶಿಸಿದ್ದರು.
2019ರಲ್ಲಿ 70 ನುಸುಳುಕೋರರನ್ನು ಹಿಡಿದು ಹಸ್ತಾಂತರಿಸಲಾಗಿತ್ತು. ಈ ಪೈಕಿ 38 ಜನ ಪಶ್ಚಿಮ ಬಂಗಾಳದ ಮೂಲಕ, 19 ತ್ರಿಪುರದ ಮೂಲಕ, 12 ಮೇಘಾಲಯದ ಮೂಲಕ ಮತ್ತು ಓರ್ವ ಅಸ್ಸೋಂ ಮೂಲಕ ಒಳನುಸುಳಿದ್ದರು.
2018ರಲ್ಲಿ ಒಟ್ಟು 262 ಬಾಂಗ್ಲಾದೇಶಿಯರನ್ನು ಅವರ ದೇಶಕ್ಕೆ ಕಳುಹಿಸಲಾಗಿತ್ತು. ಇವರಲ್ಲಿ 235 ಮಂದಿ ಪಶ್ಚಿಮ ಬಂಗಾಳದ ಮೂಲಕ, 26 ತ್ರಿಪುರ ಮತ್ತು ಓರ್ವ ಅಸ್ಸೋಂ ಮೂಲಕ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿದ್ದರು.