ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,774 ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಶನಿವಾರ ಒಂದೇ ದಿನ 9,481 ಮಂದಿ ಚೇತರಿಸಿಕೊಂಡಿದ್ದು, 621 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 3,45,72,523 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ3,39,98,278 ಮಂದಿ ಸೋಂಕಿತರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.98.34ಕ್ಕೆ ಹೆಚ್ಚಳವಾಗಿದೆ. 542 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,05,691ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
121.94 ಕೋಟಿ ಡೋಸ್ ವ್ಯಾಕ್ಸಿನೇಷನ್ :
ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 121.94 ಕೋಟಿಗೂ ಅಧಿಕ ಡೋಸ್ (1,21,94,71,134 ) ವ್ಯಾಕ್ಸಿನ್ ನೀಡಲಾಗಿದೆ. ನಿನ್ನೆ ಒಂದೇ ದಿನ 82,86,058 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹೊಸ ರೂಪಾಂತರಿ
ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಬಗೆಯ ಕೊರೊನಾ ರೂಪಾಂತರಿ ಪತ್ತೆಯಾಗಿದ್ದು, ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಇದು ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಬಂದಿಳಿಯುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
'ಅಷ್ಟೇನೂ ಅಪಾಯಕಾರಿಯಲ್ಲ':
ಅತ್ಯಂತ ವೇಗವಾಗಿ ಹರಡಬಲ್ಲ ಕೋವಿಡ್ ವೈರಸ್ನ ಹೊಸ ತಳಿಯಾದ ಓಮಿಕ್ರೋನ್ ಬಗ್ಗೆ ಇಂಗ್ಲೆಂಡ್ನ ವಿಜ್ಞಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಇದು ಅಪಾಯಕಾರಿಯಲ್ಲ, ಲಸಿಕೆಗಳಿಂದ ಈ ವೈರಸ್ನ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ:
ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರ ಕೊರೊನಾ ತಳಿ 'ಓಮಿಕ್ರೋನ್' ಪತ್ತೆಯಾಗಿರುವುದು ಭಾರತ ಸೇರಿದಂತೆ ಅನೇಕ ದೇಶಗಳ ನಿದ್ದೆಗೆಡಿಸಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ಮಹತ್ವದ ಸಭೆ ನಡೆಯಿತು. ಈ ವೇಳೆ ಲಸಿಕೆ ಅಭಿಯಾನ ಹಾಗೂ ಹೊಸ ತಳಿ ಕುರಿತಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ: Omicron variant: ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಕೆಲ ದೇಶಗಳ ಮೇಲೆ ನಿಗಾ ಇಡಲು ಸೂಚನೆ