ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶಾದ್ಯಂತ ಕೋವಿಡ್ ಪ್ರಕರಣಗಳು ಏರಿಕೆಯತ್ತ ಮುಖ ಮಾಡಿವೆ. ನಿನ್ನೆ 14 ಸಾವಿರ ಇದ್ದ ಕೋವಿಡ್ ಪ್ರಕರಣಗಳು ಇಂದು 18 ಸಾವಿರಕ್ಕೇರಿದೆ. ಹೀಗಾಗಿ ಇಳಿಕೆಯತ್ತ ಮುಖ ಮಾಡಿದ್ದ ಕೊರೊನಾ ಕೇಸ್ಗಳು ಮತ್ತೆ ಏರಿಕೆಯತ್ತ ಕಾಲಿಡುತ್ತಿವೆ.
ಇಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ವೈರಸ್ನಿಂದ ಗುಣಮುಖರಾದವರಗಿಂತ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ತಾಜಾ ವರದಿ ಪ್ರಕಾರ 12,47,506 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ 18,454 ಮಂದಿಗೆ ಸೋಂಕು ತಗುಲಿದೆ. ಬುಧವಾರಕ್ಕೆ ಹೋಲಿಸಿದರೆ ಇಂದು ಶೇ.26ರಷ್ಟು ಕೊರೊನಾ ಪ್ರಕರಣಗಳು ಹೆಚ್ಚಾಗಿವೆ.
ಕಳೆದ 24 ಗಂಟೆಯಲ್ಲಿ 17,561 ಜನರು ಕೊರೊನಾದಿಂದ ಗುಣಮುಖರಾಗಿದ್ದು, ಇಲ್ಲಿಯವರೆಗೆ 3.41 ಕೋಟಿ ಜನರು ಕೊರೊನಾದಿಂದ ಗುಣಮುಕ್ತರಾಗಿದ್ದಾರೆ. 1,78,831 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಒಟ್ಟಿನಲ್ಲಿ ಚೇತರಿಕೆ ದರ ಮಾತ್ರ ಶೇ. 98.15 ಇದೆ.
ಕಳೆದ 24 ಗಂಟೆಯಲ್ಲಿ 165 ಜನರು ಕೊರೊನಾದಿಂದ ಸಾವನ್ನಪ್ಪಿದ್ದು, ಇಲ್ಲಿಯವರೆಗೆ 4.52 ಲಕ್ಷಕ್ಕಿಂತ ಹೆಚ್ಚು ಮಂದಿ ಕೋವಿಡ್ದಿಂದ ಮೃತಪಟ್ಟಿದ್ದಾರೆ.
ಜನವರಿ 16ರಿಂದ ಪ್ರಾರಂಭವಾದ ಕೊರೊನಾ ಲಸಿಕೆ ಅಭಿಯಾನ ಇಂದಿಗೆ 100 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಈ ದಿನ ಬೆಳಗ್ಗೆ ಜನವರಿಯಿಂದ ಇಲ್ಲಿಯವರೆಗೆ ಸುಮಾರು 100 ಕೋಟಿಗೂ ಹೆಚ್ಚು ಡೋಸ್ಗಳನ್ನು ಜನರಿಗೆ ನೀಡಲಾಗಿದೆ.