ನವದೆಹಲಿ: ಫ್ರಾನ್ಸ್‌ನಿಂದ ಭಾರತೀಯ ನೌಕಾಪಡೆಗೆ 26 ರಫೇಲ್ ಜೆಟ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯವು ಗುರುವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡ ದಿನದಂದೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (Defence Acquisition Council - DAC) ಯುದ್ಧ ವಿಮಾನಗಳ ಖರೀದಿಗೆ ಅನುಮತಿ ನೀಡಿದೆ.
ರಕ್ಷಣಾ ಸ್ವಾಧೀನ ಮಂಡಳಿಯು ರಕ್ಷಣಾ ಸಚಿವಾಲಯದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಫ್ರಾನ್ಸ್‌ನಿಂದ 26 ರಫೇಲ್ ಜೆಟ್‌ಗಳ ಖರೀದಿಗೆ ಆರಂಭಿಕ ಅನುಮೋದನೆ ನೀಡಿದೆ. ಇದೇ ವೇಳೆ, ಭಾರತದಲ್ಲಿ ಇನ್ನೂ ಮೂರು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಪ್ರಸ್ತಾವನೆಯನ್ನೂ ಸಹ ಮಂಡಳಿ ಅನುಮೋದಿಸಿದೆ. ರಕ್ಷಣಾ ಖರೀದಿ ಮಂಡಳಿ (Defence Procurement Board -DPB)ಯಿಂದ ಅನುಮತಿ ಪಡೆದ ಒಂದು ವಾರದ ನಂತರ ಈ ಯೋಜನೆಗಳಿಗೆ ಡಿಎಸಿ ಅನುಮೋದನೆ ದೊರೆತಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Predator drone: ಅಮೆರಿಕದಿಂದ ಅತ್ಯಾಧುನಿಕ ಪ್ರಿಡೇಟರ್ ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ
ಇಂದು ಬೆಳಗ್ಗೆ ಪ್ರಧಾನಿ ಮೋದಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಶುಕ್ರವಾರ ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನಡುವೆ ಮಾತುಕತೆ ನಡೆಯಲಿದೆ. ಈ ಮಾತುಕತೆ ನಂತರ ಈ ಬೃಹತ್ ರಕ್ಷಣಾ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನದ ಮೇರೆಗೆ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಬಾಸ್ಟಿಲ್ ಡೇ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಳ್ಳುವರು.
ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಗಾಗಿ 26 ಡೆಕ್ ಆಧಾರಿತ ಫೈಟರ್ ಜೆಟ್‌ಗಳ ಖರೀದಿಗಾಗಿ ಎದುರು ನೋಡುತ್ತಿದೆ. ಭಾರತೀಯ ವಾಯುಪಡೆಗಾಗಿ ಭಾರತ ಈಗಾಗಲೇ ಫ್ರಾನ್ಸ್‌ನಿಂದ 36 ರಫೇಲ್ ಜೆಟ್‌ಗಳನ್ನು ಖರೀದಿಸಿದೆ. ಜೊತೆಗೆ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಟ್ (ಎಂಡಿಎಲ್)ನಿಂದ ನಿರ್ಮಿಸಲಾಗುವ ಭಾರತೀಯ ವರ್ಗದ ಅಡಿ ಮೂರು ಹೆಚ್ಚುವರಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ಖರೀದಿ ಮಾಡಲು ಒಪ್ಪಿಗೆ ನೀಡಲಾಗಿದೆ.
ಈಗಾಗಲೇ ಎಂಡಿಎಲ್ ಆರು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿದೆ. ಅವುಗಳಲ್ಲಿ ಐದು ಸೇವೆಯಲ್ಲಿವೆ. ಆರನೆಯದನ್ನು 2024ರಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಜಲಾಂತರ್ಗಾಮಿ ನೌಕೆಗಳ ಖರೀದಿಯು ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ನೀಡುತ್ತದೆ. ಅಗತ್ಯ ಕಾರ್ಯಾಚರಣೆಯ ಸನ್ನದ್ಧತೆಗೆ ಸಹಾಯ ಮಾಡುತ್ತದೆ. ದೇಶೀಯ ವಲಯದಲ್ಲಿ ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ದೆಹಲಿಯಿಂದ ಪ್ಯಾರಿಸ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ- ವಿಡಿಯೋ