ನವದೆಹಲಿ: ಭಾರತ ಮತ್ತು ಚೀನಾದ ರಕ್ಷಣಾ ಇಲಾಖೆಯ ಅಧಿಕಾರಿಗಳು ಇದೇ ವಾರ ಒಂಭತ್ತನೇ ಸುತ್ತಿನ ಮಾತುಕತೆ ನಡೆಸಲಿದ್ದು, ಸೇನೆ ಹಿಂಪಡೆತ ವಿಚಾರವಾಗಿ ಉನ್ನತ ಮಟ್ಟದ ಚರ್ಚೆ ನಡೆಸಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎರಡೂ ರಾಷ್ಟ್ರಗಳು ಈ ಮೊದಲು ನವೆಂಬರ್ 6ರಂದು ಕಾರ್ಪ್ಸ್ ಕಮಾಂಡರ್ ಹಂತದ ಮಾತುಕತೆಗಳನ್ನು ನಡೆಸಿದ್ದವು. ಮಾತುಕತೆ ಗೊಂದಲದಲ್ಲಿ ಅಂತ್ಯವಾಗಿದ್ದರೂ, ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳಲು, ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವುದಾಗಿ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿದ್ದವು.
ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರಿಂದ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಹೊಸ 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಭಾರತದ ಪರ ನೇತೃತ್ವ ವಹಿಸಿದ್ದರು.
ಭಾರತ-ಚೀನಾ ನಡುವೆ ಈಗಾಗಲೇ 8 ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಇದಕ್ಕೂ ಮೊದಲು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್ 21 ಹಾಗೂ ಅಕ್ಟೋಬರ್ 12, ನವೆಂಬರ್ 6ರಂದು ಸಭೆಗಳು ನಡೆದಿದ್ದವು.
ಭಾನುವಾರ ರಕ್ಷಣಾ ಸಚಿವಾಲಯ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತ ಹಾಗೂ ಚೀನಾ ಎಲ್ಎಸಿಯಲ್ಲಿ ಸೇನೆ ಹಿಂಪಡೆಯುವ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಗಳನ್ನು ಹೊಂದಿವೆ ಎಂದು ಉಲ್ಲೇಖಿಸಿತ್ತು.