ನವದೆಹಲಿ: ಚೀನಾದ ಕಡೆಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯ ಮೋಲ್ಡೋದಲ್ಲಿ ಭಾರತ ಮತ್ತು ಚೀನಾ ನಡುವಿನ 10 ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಸತತ 16 ಗಂಟೆಗಳ ಕಾಲ ನಡೆದಿದೆ.
ಶನಿವಾರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಸಭೆಯು ತಡರಾತ್ರಿ 2 ಗಂಟೆಗೆ ಮುಕ್ತಾಯವಾಗಿದೆ. ಪ್ಯಾಂಗಾಂಗ್ ಸರೋವರದ ಬಳಿಕ ಪೂರ್ವ ಲಡಾಖ್ನಲ್ಲಿನ ಇತರ ಮೂರು ಪ್ರದೇಶಗಳಾದ ಗೋಗ್ರಾ ಹೈಟ್ಸ್, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ನಿಂದಲೂ ಉಭಯ ರಾಷ್ಟ್ರಗಳ ಸೇನೆಗಳು ಹಿಂದಕ್ಕೆ ಸರಿಯುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗುಜರಾತ್ನ ಆರು ಮಹಾನಗರ ಪಾಲಿಕೆಗಳಿಗಿಂದು ಮತದಾನ.. ಅಮಿತ್ ಶಾ ವೋಟಿಂಗ್
ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವಾರು ಸುತ್ತಿನ ನಿರಂತರ ಮಾತುಕತೆಗಳ ಬಳಿಕ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಭಾರತ ಹಾಗೂ ಚೀನಾ ತಮ್ಮ ಸೇನೆಯನ್ನು ವಾಪಸ್ ಕರೆಯಿಸಿಕೊಂಡಿವೆ. ಇದರ ಬೆನ್ನಲ್ಲೇ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಿವೆ.
ಗಡಿಯಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಪ್ಯಾಂಗಾಂಗ್ ಸರೋವರದಂತೆ ಗೋಗ್ರಾ ಹೈಟ್ಸ್, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ ಪ್ರದೇಶಗಳಿಂದಲೂ ಉಭಯ ರಾಷ್ಟ್ರಗಳು ಶೀಘ್ರದಲ್ಲೇ ತಮ್ಮ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳುವ ಸಾಧ್ಯತೆಯಿದೆ.