ನವದೆಹಲಿ: ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ 14ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯು ಚೀನಾದ ಚುಶುಲ್-ಮೋಲ್ಡೊ ಮೀಟಿಂಗ್ ಪಾಯಿಂಟ್‌ನಲ್ಲಿ ಬುಧವಾರ ಸುಮಾರು 13 ಗಂಟೆಗಳ ಕಾಲ ನಡೆದಿದ್ದು, ರಾತ್ರಿ 10.30ರ ಸುಮಾರಿಗೆ ಮುಕ್ತಾಯವಾಯಿತು ಎಂದು ಮೂಲಗಳು ತಿಳಿಸಿವೆ.
14 ಕಾರ್ಪ್ಸ್ ಅಥವಾ ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೆಂಗುಪ್ತಾ ಭಾರತವನ್ನು ಪ್ರತಿನಿಧಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈವರೆಗೆ ಭಾರತ ಮತ್ತು ಚೀನಾದ ನಡುವೆ 13 ಸುತ್ತಿನ ಮಾತುಕತೆ ನಡೆದಿದೆ. ಪೂರ್ವ ಲಡಾಖ್ ಪ್ರದೇಶದಲ್ಲಿನ ಎಲ್ಎಸಿ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆಗಳನ್ನು ನಡೆಸಲಾಗಿದೆ.
ಪೂರ್ವ ಲಡಾಖ್ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಭಾರತ ಕೆಲಸ ಮಾಡುತ್ತಿದ್ದು, ಚೀನಾದ ಪಡೆಗಳ ದುಸ್ಸಾಹಸವನ್ನು ನಿಯಂತ್ರಣ ಮಾಡುವ ಸಲುವಾಗಿ ಗಡಿಯಲ್ಲಿ ಸೇನೆಯನ್ನು ನಿಯೋಜಿಸಿದ್ದು, ಹಲವಾರು ರಸ್ತೆ ಮಾರ್ಗಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ.
ಚೀನಾದ ಸೇನೆಯೊಂದಿಗೆ ಭಾರತೀಯ ಸೇನೆಯು ದೃಢ ಮತ್ತು ಶಾಂತಿಯುತ ರೀತಿಯಲ್ಲಿ ವ್ಯವಹರಿಸುವುದನ್ನು ಮುಂದುವರೆಸುತ್ತದೆ ಮತ್ತು ಈ ಪ್ರದೇಶದಲ್ಲಿ ಅತ್ಯುನ್ನತ ಮಟ್ಟದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಈ ಹಿಂದೆ ಹೇಳಿದ್ದರು.
ಈಗ 14ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದ್ದು, ಚೀನಾ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: US inflation: ನಾಲ್ಕು ದಶಕಗಳ ನಂತರ ದಾಖಲೆಯ ಹಣದುಬ್ಬರಕ್ಕೆ ಒಳಗಾದ ಅಮೆರಿಕ!