ಮುಂಬೈ: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ವಿರೋಧಿ ಬಣವಾದ I.N.D.I.A ಮೈತ್ರಿಕೂಟದ ಜಂಟಿ ಲೋಗೊ ಅನಾವರಣವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಇಂಡಿಯಾ ಸಂಘಟಕರು ಶುಕ್ರವಾರ ತಿಳಿಸಿದ್ದಾರೆ. ಮುಂಬೈನ ಪಂಚತಾರಾ ಹೋಟೆಲ್ ಗ್ರ್ಯಾಂಡ್ ಹಯಾತ್ನಲ್ಲಿ ಶುಕ್ರವಾರ ಬೆಳಗ್ಗೆ ಇಂಡಿಯಾ ಕಾನ್ಕ್ಲೇವ್-3.0 ಅದ್ದೂರಿಯಾಗಿ ಪ್ರಾರಂಭವಾಗಿದೆ.
ಏತನ್ಮಧ್ಯೆ ಲೋಗೊ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಆತಿಥೇಯ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮತ್ತು ಕಾಂಗ್ರೆಸ್ನ ವಿರೋಧ ಪಕ್ಷದ ನಾಯಕ ವಿಜಯ್ ವಡ್ಡೆಟ್ಟಿವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 28 ವಿರೋಧ ಪಕ್ಷಗಳ ಕೆಲ ನಾಯಕರು ತಮ್ಮ ಕೆಲ ಸಲಹೆಗಳನ್ನು ನೀಡಿದ್ದಾರೆ. ಲೋಗೋವನ್ನು ಅಂತಿಮಗೊಳಿಸುವ ಮೊದಲು ಅವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ರಾವತ್ ಹೇಳಿದರು.
ಲೋಗೊ ವಿನ್ಯಾಸದ ವಿಷಯದಲ್ಲಿ ಮೈತ್ರಿಕೂಟದ ಪಕ್ಷಗಳಲ್ಲಿ ಭಿನ್ನಮತವಿದೆ ಎಂದು ಮೂಲಗಳು ತಿಳಿಸಿವೆ. ಲೋಗೊ ವರ್ಣ ಸಂಯೋಜನೆ, ಗಾತ್ರ ಸೇರಿದಂತೆ ಲೋಗೋ ವಿನ್ಯಾಸದ ವಿವಿಧ ಅಂಶಗಳ ಬಗ್ಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಒಮ್ಮತ ಮೂಡಿಲ್ಲ ಮೈತ್ರಿಕೂಟದ ಮೂಲಗಳು ಬಹಿರಂಗಪಡಿಸಿವೆ.
ಎಲ್ಲರ ಅನುಮೋದನೆ ಪಡೆದ ನಂತರ ಯೋಜಿತ ಇಂಡಿಯಾ ಲಾಂಛನವನ್ನು ಲೋಕಸಭಾ ಪ್ರಚಾರದ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಹೆಸರುಗಳು ಮತ್ತು ಚುನಾವಣಾ ಚಿಹ್ನೆಗಳೊಂದಿಗೆ ಪ್ರದರ್ಶಿಸುವ ಸಾಧ್ಯತೆಯಿದೆ. ಇದರಿಂದ ಮತದಾರರು ಆಯಾ ಕ್ಷೇತ್ರದ ಸಂಯೋಜಿತ ವಿರೋಧ ಪಕ್ಷಗಳ ಜಂಟಿ ಅಧಿಕೃತ ಅಭ್ಯರ್ಥಿಯನ್ನು ಗುರುತಿಸಲು ಸಹಾಯಕವಾಗಲಿದೆ.
ಇಂಡಿಯಾ ಮೈತ್ರಿಕೂಟದ ಇಂದಿನ ಸಭೆಯಲ್ಲಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಶಿವಸೇನೆ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದಾರೆ. ಮುಂಬರುವ 2024 ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರವನ್ನು ಚರ್ಚಿಸುವ ಗುರಿಯನ್ನು ಹೊಂದಿರುವ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ಇದಾಗಿದೆ. ಲೋಕಸಭಾ ಚುನಾವಣೆಗೆ ಮೈತ್ರಿ ಕಾರ್ಯತಂತ್ರಗಳು ಮತ್ತು ರಾಜ್ಯಗಳಲ್ಲಿ ಸೀಟು ಹಂಚಿಕೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.
ಇಂಡಿಯಾ ಅಥವಾ 'ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ ಕ್ಲೂಸಿವ್ ಅಲೈಯನ್ಸ್' ಎಂಬುದು ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ಮೈತ್ರಿಕೂಟವಾಗಿದೆ. ಪ್ರಧಾನಿ ಮೋದಿಯವರ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ವನ್ನು ಎದುರಿಸಲು ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಗೆಲ್ಲುವುದನ್ನು ತಡೆಗಟ್ಟಲು ಅನೇಕ ಪಕ್ಷಗಳು ಒಗ್ಗೂಡಿವೆ. ವಿರೋಧ ಪಕ್ಷಗಳ ಮೈತ್ರಿಕೂಟದ ಮೊದಲ ಸಭೆ ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ಮತ್ತು ಎರಡನೇ ಸಭೆ ಜುಲೈ 17-18 ರಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆದಿತ್ತು.
ಇದನ್ನೂ ಓದಿ : ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ 6.7ಕ್ಕೆ ಹೆಚ್ಚಿಸಿದ ಮೂಡೀಸ್ ಇನ್ವೆಸ್ಟರ್ಸ್