ನವದೆಹಲಿ: ವಿಶ್ವಸಂಸ್ಥೆಗೆ ಮಹಿಳಾ ಶಾಂತಿಪಾಲಕರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಈ ನಿಟ್ಟಿನಲ್ಲಿ ನಿಗದಿತ ಸಮಯದೊಳಗೆ ಗುರಿಗಳನ್ನು ಪೂರೈಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ಕಾರ್ಯದರ್ಶಿ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಯುಎನ್ ಮತ್ತು ವಿಯೆಟ್ನಾಂ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಾ ಅವರು ಮಾತನಾಡಿ, ಈ ಕುರಿತು ಪ್ರಸ್ತಾಪಿಸಿದರು.
ಮಹಿಳಾ ಶಾಂತಿ ಮತ್ತು ಸುರಕ್ಷತೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ "ಶಾಂತಿಪಾಲನೆಯಲ್ಲಿ ಮಹಿಳೆಯರ ಭವಿಷ್ಯ" ಎಂಬ ವಿಷಯದ ಕುರಿತು ಮಾತನಾಡಿದ ವಿಕಾಸ್ ಸ್ವರೂಪ್, ಶಾಂತಿ ಪಾಲನೆಯಲ್ಲಿ ಮಹಿಳೆಯರು ಹೆಚ್ಚು ಪರಿಣಾಮಕಾರಿ ಎಂದು ಭಾರತ ಬಲವಾಗಿ ನಂಬುತ್ತದೆ ಎಂದರು.
"ನಾವೆಲ್ಲರೂ ಅನುಭವದಿಂದ ತಿಳಿದಿರುವಂತೆ, ಯಾವುದೇ ಸಂಘರ್ಷದ ಪರಿಸ್ಥಿತಿಯಲ್ಲಿ ಮಹಿಳೆಯರು ಹೆಚ್ಚು ಬಳಲುತ್ತಿದ್ದಾರೆ. ಶಾಂತಿ ಪಾಲನೆಯಲ್ಲಿ ಹೆಚ್ಚಿನ ಮಹಿಳೆಯರು ಪರಿಣಾಮಕಾರಿಯಾಗಿರುತ್ತಾರೆ. ಮಹಿಳಾ ಶಾಂತಿ ಪಾಲಕರಿಗೆ ಸಮುದಾಯಗಳಲ್ಲಿ ಹೆಚ್ಚಿನ ಗೌರವವಿದೆ ಮತ್ತು ಇತರ ಮಹಿಳೆಯರಿಗೆ ಅವರು ಸ್ಫೂರ್ತಿ ನೀಡುತ್ತಾರೆ. ಶಾಂತಿ ಮತ್ತು ರಾಜಕೀಯ ಪ್ರಕ್ರಿಯೆಗಳಲ್ಲಿ ಅರ್ಥಪೂರ್ಣ ಪಾತ್ರ ವಹಿಸುತ್ತಾರೆ" ಎಂದು ಅವರು ಹೇಳಿದರು.