ನವದೆಹಲಿ: ಭಾರತ ಮತ್ತು ರಷ್ಯಾದ ಒಕ್ಕೂಟದ ನಡುವಿನ 2+2 ಸಂವಾದಕ್ಕೆ ಡಿಸೆಂಬರ್ 6 ರಂದು ಚಾಲನೆ ನೀಡಲಾಗುವುದು ಹಾಗೂ ಅಂದೇ ಮೊದಲ ಸಭೆ ನಡೆಯಲಿದೆ. ಭಾರತ ಮತ್ತು ರಷ್ಯಾದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿಯಲ್ಲಿ 2+2 ಮಾತುಕತೆ ನಡೆಯಲಿದ್ದು, ರಷ್ಯಾದ ವಿದೇಶಾಂಗ ಸೆರ್ಗೆಯ್ ಲಾವ್ರೊವ್ ಮತ್ತು ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ಡಿ.5 ಅಥವಾ 6ರಂದು ನವದೆಹಲಿಗೆ ಆಗಮಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಸಂವಾದದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರೋನ್' ಆತಂಕ: ದಕ್ಷಿಣ ಆಫ್ರಿಕಾ ಸೇರಿ ಈ ದೇಶಗಳಿಗೆ ಪ್ರವೇಶ ನಿಷೇಧ
2021ರ ಏಪ್ರಿಲ್ 28 ರಂದು ನಡೆದ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಒಪ್ಪಂದದ ಪ್ರಕಾರ 2+2 ಸಂವಾದವನ್ನು ನಡೆಸಲಾಗುತ್ತಿದೆ.
ಸಂವಾದದ ಕಾರ್ಯಸೂಚಿಯು ಪರಸ್ಪರ ರಾಜಕೀಯ ಹಿತಾಸಕ್ತಿ ಮತ್ತು ರಕ್ಷಣಾ ವಿಷಯಗಳನ್ನು ಒಳಗೊಂಡಿರುತ್ತದೆ. ಇದು ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.