ನವದೆಹಲಿ : ಮೂರು ವರ್ಷಗಳ ಹಿಂದೆ ಶೇ.52ರಷ್ಟಿದ್ದ ಅನೌಪಚಾರಿಕ ಆರ್ಥಿಕತೆ ಅಥವಾ ಅಸಂಘಟಿತ ಅರ್ಥವ್ಯವಸ್ಥೆ ಇದೀಗ ಶೇ.15-20ಕ್ಕೆ ಬಂದಿಳಿದಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ವರದಿ ತಿಳಿಸಿದೆ.
ಎಸ್‌ಬಿಐನ ಆರ್ಥಿಕ ಸಂಶೋಧನಾ ವಿಭಾಗದ ವರದಿ ಹೇಳುವ ಪ್ರಕಾರ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ವರ್ಧಿತ ಡಿಜಿಟಲೀಕರಣ ಹಾಗೂ ನೋಟು ಅಮಾನ್ಯೀಕರಣದ ನಂತರ ಹಂತ ಹಂತವಾಗಿ ದೇಶದಲ್ಲಿ ಅಸಂಘಟಿತ ಅರ್ಥವ್ಯವಸ್ಥೆ ಕುಸಿಯುತ್ತಾ ಬಂದಿದೆ.
ಕೇಂದ್ರ ಸರ್ಕಾರದ ಇ-ಶ್ರಮ್ ಪೋರ್ಟಲ್‌ನಲ್ಲಿನ ಇತ್ತೀಚಿನ ಯೋಜನೆ ಸೇರಿದಂತೆ ಕಳೆದ ಕೆಲವು ವರ್ಷಗಳಿಂದ ವಿವಿಧ ರೂಪಗಳ ಮೂಲಕ ಕನಿಷ್ಠ 13 ಲಕ್ಷ ಕೋಟಿ ರೂ. ಔಪಚಾರಿಕ ಆರ್ಥಿಕತೆ ಅಥವಾ ಸಂಘಟಿತ ಅರ್ಥವ್ಯವಸ್ಥೆಗೆ ಬಂದಿದೆ.
ಇ-ಶ್ರಮ್ ಪೋರ್ಟಲ್
ಅಸಂಘಟಿತ ಕಾರ್ಮಿಕರ ಭಾರತದ ಮೊದಲ ರಾಷ್ಟ್ರೀಯ ಡೇಟಾಬೇಸ್ ಹೊಂದಿರುವ ಇ-ಶ್ರಮ್ ಪೋರ್ಟಲ್ನಲ್ಲಿ ಅಕ್ಟೋಬರ್ 30ರವರೆಗೆ 5.7 ಕೋಟಿ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇವರಲ್ಲಿ ಶೇ.62ರಷ್ಟು ಮಂದಿ 18-40 ವಯೋಮಾನದವರಾಗಿದ್ದಾರೆ. ಅಲ್ಲದೇ ಇವರಲ್ಲಿ ಶೇ.92ರಷ್ಟು ಜನರ ಮಾಸಿಕ ಆದಾಯ 10,000 ರೂ.ಗಿಂತ ಕಡಿಮೆಯಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ದರ ಇಳಿಕೆ ಸಾಧ್ಯತೆ : ಪಿಎಫ್ ಖಾತೆದಾರರಿಗೆ ಆಧಾರ್ ಲಿಂಕ್ಗೆ ಗಡುವು ವಿಸ್ತರಣೆ
ರಾಜ್ಯವಾರು ಅಂಕಿಅಂಶಗಳ ಪ್ರಕಾರ ಇ-ಶ್ರಮ್ ಪೋರ್ಟಲ್‌ನಲ್ಲಿನ ಒಟ್ಟು ನೋಂದಣಿಯಲ್ಲಿ ಶೇ.72ರಷ್ಟು ಪಾಲನ್ನು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರಪ್ರದೇಶ ರಾಜ್ಯಗಳು ಹೊಂದಿವೆ.
ಶೇ.55ರಷ್ಟು ಮಂದಿ ಕೃಷಿ ವಲಯದ ಕಾರ್ಮಿಕರಾಗಿದ್ದರೆ, ಶೇ.13 ಮಂದಿ ನಿರ್ಮಾಣ ವಲಯದ ಕಾರ್ಮಿಕರಾಗಿದ್ದಾರೆ. ಹೀಗಾಗಿ, ಇ-ಶ್ರಮ್ ಎಂಬುದು ಸಂಘಟಿತ ಅರ್ಥವ್ಯವಸ್ಥೆ ರೂಪಿಸಲು ಒಂದು ದೊಡ್ಡ ಹೆಜ್ಜೆಯಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ)
ಕೃಷಿಯಲ್ಲಿಯೂ ಸಹ ಕೆಸಿಸಿ ಕಾರ್ಡ್‌ಗಳ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಮೂಲಕ 4.6 ಲಕ್ಷ ಕೋಟಿ ರೂ. ಸಂಘಟಿತ ಅರ್ಥವ್ಯವಸ್ಥೆಗೆ ಬಂದಿದೆ.