ಕಾಸರಗೋಡು (ಕೇರಳ): ಒಂದು ಕುಟುಂಬದಲ್ಲಿ ಎಲ್ಲರದ್ದೂ ಒಂದೇ ಜನ್ಮ ದಿನಾಂಕ ಅನ್ನೋದನ್ನು ಯಾರಾದರೂ ಊಹಿಸಬಹುದೇ?. ಒಂದು ವೇಳೆ ಇದು ಅಸಾಧ್ಯ ಎಂದು ನೀವು ಭಾವಿಸಿದರೆ, ಅದು ತಪ್ಪು. ಯಾಕೆಂದರೆ, ಕಾಸರಗೋಡಿನ ಈ ಕುಟುಂಬದ ನಾಲ್ವರು ಕೂಡ ಒಂದೇ ಜನ್ಮ ದಿನಾಂಕ ಹೊಂದಿದ್ದಾರೆ.
ಹೌದು, ಕಣ್ಣೂರು-ಕಾಸರಗೋಡು ಗಡಿಭಾಗದ ಪಡಿಯೊಟ್ಟುಂಚಾಲ್ ಮೂಲದ ಅನೀಶ್ ಕುಮಾರ್ ಕುಟುಂಬದಲ್ಲಿ ನಾಲ್ವರು ಮೇ 25ರಂದು ಒಂದೇ ದಿನ ಬರ್ತ್ ಡೇ ಆಚರಿಸಿಕೊಳ್ಳುತ್ತಾರೆ. ಅನೀಶ್ ಜೊತೆಗೆ ಪತ್ನಿ ಅಜಿತಾ ಹಾಗೂ ಮಕ್ಕಳಾದ ಆರಾಧ್ಯ ಮತ್ತು ಮಗ ಅಗ್ನಯ್ ಅವರದ್ದು ಕೂಡ ಒಂದೇ ಜನ್ಮ ದಿನಾಂಕವಾಗಿದೆ.
ಈ ಬಗ್ಗೆ 'ಈಟಿವಿ ಭಾರತ್' ಜೊತೆಗೆ ಮಾತನಾಡಿರುವ ಅನೀಶ್ ಕುಮಾರ್, ಅಜಿತಾರನ್ನು ವಿವಾಹವಾದಾಗ ಅವರ ಜನ್ಮ ದಿನಾಂಕ ಕೇಳಿದಾಗ ನನಗೂ ಆಶ್ಚರ್ಯವಾಯಿತು. ನಂತರದಲ್ಲಿ 2012ರಲ್ಲಿ ಇದೇ ದಿನಾಂಕದಂದು ನಮಗೆ ಮೊದಲ ಮಗಳು ಜನಿಸಿದಳು. ಆಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಹೇಳಿದರು.
ಮತ್ತೊಂದು ಹಾಗೂ ನಿಜವಾದ ಆಶ್ಚರ್ಯವೆಂದರೆ, 2019ರಲ್ಲಿ ಮೇ 25ರಂದೇ ಮಗ ಜನಿಸಿದ. ಇದು ನಮ್ಮ ಕುಟುಂಬಕ್ಕೆ ಸಿಕ್ಕಿರುವ ಒಂದು ದೊಡ್ಡ ಉಡುಗೊರೆಯಂತಿದೆ. ಇದೆಲ್ಲ ಹೇಗೆ ಸಂಭವಿಸಿತು ಎಂಬುದು ನಮಗೂ ಗೊತ್ತಿಲ್ಲ ಎಂದು ಸಂತಸ ಹಂಚಿಕೊಂಡಿದರು. ಇನ್ನೊಂದು ವಿಶೇಷ ಎಂದರೆ, ನಾಲ್ವರ ಹೆಸರೂ ಕೂಡ 'ಎ' ಯಿಂದಲೇ ಆರಂಭವಾಗುತ್ತದೆ.!
ಇದನ್ನೂ ಓದಿ: ಮದುವೆಗೆ ಮುಂಚೆಯೇ ಇಬ್ಬರಿಗೆ ತಲಾ ಒಂದು ಮಗು ಕೊಟ್ಟು, ಒಂದೇ ಮಂಟಪದಲ್ಲಿ ಮದುವೆಯಾದ!