ನವದೆಹಲಿ: 'ಏಕ್ ಭಾರತ್ ಶ್ರೇಷ್ಠ ಭಾರತ್' ಆಚರಣೆಯ ಭಾಗವಾಗಿ ಇನ್ಮುಂದೆ ದೇಶಾದ್ಯಂತ ಎಲ್ಲ ರಾಜ್ಯಗಳು ಬೇರೆ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಗೆ ಮುಂದಾಗಿವೆ. ಇದೇ ಮೊದಲ ಬಾರಿಗೆ ಆಯಾ ರಾಜ್ಯಗಳ ರಾಜಭವನಗಳು ಇತರ ರಾಜ್ಯಗಳ ಸಂಸ್ಥಾಪನಾ ದಿನದ ನಿಮಿತ್ತ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಉಪಕ್ರಮದ ಭಾಗವಾಗಿ ಮೇ 1ರಂದು ಮಹಾರಾಷ್ಟ್ರ ಮತ್ತು ಗುಜರಾತ್‌ನ ಸಂಸ್ಥಾಪನಾ ದಿನವನ್ನು ದೇಶಾದ್ಯಂತ ಎಲ್ಲ ರಾಜಭವನಗಳಲ್ಲಿ ಆಚರಿಸಲಾಗುತ್ತಿದೆ. 20 ರಾಜ್ಯಗಳು ಮತ್ತು ಎಲ್ಲ ಎಂಟು ಕೇಂದ್ರಾಡಳಿತ ಪ್ರದೇಶಗಳು ಸಹ ಈ ಎರಡೂ ರಾಜ್ಯಗಳ ದಿನಾಚರಣೆಗಳನ್ನು ತಮ್ಮ-ತಮ್ಮ ರಾಜಭವನ (ಗವರ್ನರ್ ಹೌಸ್) ಮತ್ತು ರಾಜ್ ನಿವಾಸ್ (ಲೆಫ್ಟಿನೆಂಟ್ ಗವರ್ನರ್ ನಿವಾಸ)ನಲ್ಲಿ ಸೋಮವಾರ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ದೃಢಪಡಿಸಿವೆ. ಬಹುತೇಕ ಎಲ್ಲ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ: ಮನ್ ಕಿ ಬಾತ್ ದೇಶದ ಕೋಟ್ಯಂತರ ಜನರ ಧ್ವನಿ: ಪ್ರಧಾನಿ ಮೋದಿ
ಅಲ್ಲದೇ, ಆಯಾ ರಾಜ್ಯದಲ್ಲಿ ವಾಸಿಸುವ ಮಹಾರಾಷ್ಟ್ರ ಮತ್ತು ಗುಜರಾತಿ ಮೂಲದ ಜನರಿಗೆ ರಾಜಭವನಗಳು ಆತಿಥ್ಯ ನೀಡಲಿವೆ. ರಾಜ್ಯಗಳ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅಡುಗೆ ಪದ್ಧತಿಗಳನ್ನು ಎತ್ತಿ ಹಿಡಿಯಲು ವಿಭಿನ್ನ ಕಾರ್ಯಕ್ರಮಗಳನ್ನೂ ಆಯೋಜಿಸಲಿವೆ. ಆಹ್ವಾನಿತರು ಮತ್ತು ಗಣ್ಯರು ಆಯಾ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಅಸ್ಸಾಂ ಮತ್ತು ಉತ್ತರಾಖಂಡ್ ರಾಜಭವನಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ನ ಸಂಸ್ಥಾಪನಾ ದಿನಾಚರಣೆಗೆ ಸಿದ್ಧತೆಗಳು ಆರಂಭವಾಗಿವೆ. ಇತರ ರಾಜ್ಯಗಳ ರಚನೆಯ ದಿನಗಳ ಸಂದರ್ಭದಲ್ಲೂ ಇದೇ ರೀತಿಯ ಕಾರ್ಯಕ್ರಮಗಳು ಮತ್ತ ಆಚರಣೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಪ್ರದಾಯ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶ: 2015ರ ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 140ನೇ ಜನ್ಮದಿನದಂದು ಪ್ರಧಾನಿ ಮೋದಿ 'ಏಕ್ ಭಾರತ್ ಶ್ರೇಷ್ಠ ಭಾರತ್' ಉಪಕ್ರಮವನ್ನು ಘೋಷಿಸಿದರು. ಇದರ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಚರಣೆಗಳ ಮಾಹಿತಿ, ಅರಿವು, ಜ್ಞಾನ ಹೆಚ್ಚಳ ಮತ್ತು ಬಾಂಧವ್ಯ ವೃದ್ಧಿಯೊಂದಿಗೆ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಪ್ರತಿ ರಾಜ್ಯದ ಪರಂಪರೆ ಮತ್ತು ಸಂಪ್ರದಾಯಗಳ ಆಚರಣೆಗೆ ಹೆಚ್ಚಿನ ಇತ್ತು ನೀಡಲಾಗುತ್ತಿದೆ.
ದೇಶದ ವಿವಿಧ ಭಾಗಗಳ ಜನರಿಗೆ ಇತರ ಪ್ರದೇಶಗಳ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಬೇರೆ ಬೇರೆ ರಾಜ್ಯಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಹಬ್ಬಗಳಲ್ಲಿ ಇತರ ಭಾಗಗಳ ಜನರು ಸಹ ಪಾಲ್ಗೊಳ್ಳಬೇಕೆಂಬ ಉದ್ದೇಶವನ್ನು ಹೊಂದಲಾಗಿದೆ.
ಇದನ್ನೂ ಓದಿ: ಮನ್ ಕಿ ಬಾತ್ನಲ್ಲಿ ಮೋದಿ ಉಲ್ಲೇಖಿಸಿದ ಮಾರ್ಗದರ್ಶಕ ವಕೀಲ್ ಸಾಹೇಬ್ ಯಾರು ಗೊತ್ತಾ?