ಭುವನೇಶ್ವರ (ಒಡಿಶಾ): ಈಗಾಗಲೇ ತೃತೀಯ ಲಿಂಗಿಗಳಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೆ ತಂದಿರುವ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ, ಇದೀಗ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
ಇದೇ ಮೊದಲ ಬಾರಿಗೆ ರಾಜ್ಯ ಪೊಲೀಸ್ ಇಲಾಖೆಗೆ ಸೇರಲು ತೃತೀಯ ಲಿಂಗಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್‌ಗಳು ಮತ್ತು ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಸೂಚಿಸಿ ಒಡಿಶಾ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ. 477 ಸಬ್ ಇನ್ಸ್‌ಪೆಕ್ಟರ್ ಮತ್ತು 244 ಕಾನ್‌ಸ್ಟೇಬಲ್ ನೇಮಕಕ್ಕೆ ಪುರುಷರು, ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಪ್ಲಿಕೇಶನ್ ಪೋರ್ಟಲ್ ಜೂನ್ 22ರಿಂದ ಜುಲೈ 15ರವರೆಗೆ ತೆರೆದಿರುತ್ತದೆ.
ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆ: 15 ತೃತೀಯ ಲಿಂಗಿಗಳಿಂದ ಪರೀಕ್ಷೆ ಪಾಸ್!
ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಒಡಿಶಾ ತೃತೀಯ ಲಿಂಗಿಗಳ ಕಲ್ಯಾಣ ಸಂಘದ ಅಧ್ಯಕ್ಷೆ ಮೀರಾ ಪರಿದಾ, "ಲಿಂಗ ಸಮಾನತೆ ಮತ್ತು ತೃತೀಯ ಲಿಂಗಿ ಸಮುದಾಯದ ಅಭಿವೃದ್ಧಿಯ ಕಡೆಗಿನ ನಡೆಗೆ ಮುಖ್ಯಮಂತ್ರಿ ಮತ್ತು ಗೃಹ ಇಲಾಖೆಗೆ ಧನ್ಯವಾದಗಳು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ ಟ್ರಾನ್ಸ್‌ಜೆಂಡರ್ಸ್ ಮೇಲಿನ ಸಮಾಜದ ಗ್ರಹಿಕೆ ಬದಲಾಯಿಸಲು ಸಹಕರಿಸುತ್ತದೆ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಛತ್ತೀಸ್ಗಢ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಕಾನ್‌ಸ್ಟೇಬಲ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ 15 ತೃತೀಯ ಲಿಂಗಿಗಳು ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಿಕೊಳ್ಳಲು ಸಿದ್ಧರಾಗಿದ್ದಾರೆ.