ಡೆಹ್ರಾಡೂನ್/ಉತ್ತರಾಖಂಡ: ಓಂ ಪರ್ವತ ಸೇರಿದಂತೆ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಕುರಿತು ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್ ಕಳವಳ ವ್ಯಕ್ತಪಡಿಸಿದೆ.
ವಾಯುಪಡೆಯಿಂದ ನಿವೃತ್ತರಾದ ಮತ್ತು ದೇಶದ ಪ್ರತಿಷ್ಠಿತ ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್‌ನ ಸದಸ್ಯರಾದ ಸುಧೀರ್ ಕುಟ್ಟಿ ಅವರು ಉತ್ತರಾಖಂಡದ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಪ್ರವಾಸಿಗರ ಪ್ರಭಾವದ ಕುರಿತು ಪರಿಣಿತ ತಂಡದೊಂದಿಗೆ ಸಮೀಕ್ಷೆ ನಡೆಸಿದ್ದಾರೆ.
ಈ ತಜ್ಞರ ತಂಡವು ಓಂ ಪರ್ವತ, ವ್ಯಾಸ್ ವ್ಯಾಲಿ ಸೇರಿದಂತೆ ಉತ್ತರಾಖಂಡದ ಅನೇಕ ಎತ್ತರದ ಹಿಮಾಲಯ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಜೈವಿಕ ವೈವಿಧ್ಯತೆಯನ್ನ ಸಂಶೋಧಿಸಿದ ಉತ್ತರಾಖಂಡ ಸರ್ಕಾರಕ್ಕೆ 3 ಪುಟಗಳ ವರದಿಯನ್ನು ಸಲ್ಲಿಸಿದೆ.
ದರ್ಮಾ ಮತ್ತು ವ್ಯಾಸ್ ಕಣಿವೆಯಲ್ಲಿ ಹೆಚ್ಚಿದ ಪ್ರವಾಸಿಗರ ದಂಡು: ಉತ್ತರಾಖಂಡದ ಎತ್ತರದ ಹಿಮಾಲಯ ಪ್ರದೇಶವು ನೈಸರ್ಗಿಕವಾಗಿ ಅತ್ಯಂತ ಸುಂದರವಾಗಿದ್ದು, ಪ್ರವಾಸಿಗರ ಹರಿವು ಹೆಚ್ಚುತ್ತಿದೆ. ದರ್ಮಾ ಮತ್ತು ವ್ಯಾಸ್ ವ್ಯಾಲಿಯಲ್ಲಿ ಆದಿ ಕೈಲಾಶ್ ಮತ್ತು ಓಂ ಪರ್ವತ ಸೇರಿದಂತೆ ಪಂಚಚುಲಿ ಬೇಸ್ ಕ್ಯಾಂಪ್ ಟ್ರ್ಯಾಕ್‌ನಲ್ಲಿ ಈ ಸಮೀಕ್ಷೆಯನ್ನ ಮಾಡಲಾಗಿದೆ.
ತಜ್ಞರ ತಂಡವು ಸ್ಥಳೀಯರೊಂದಿಗೆ ಚರ್ಚಿಸಿ ಮಾಹಿತಿ ಕಲೆಹಾಕಿದೆ. ಜೊತೆಗೆ ಈ ಸ್ಥಳಗಳಲ್ಲಿ ರಸ್ತೆಗಳನ್ನು ನಿರ್ಮಿಸಿ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎತ್ತರದ ಹಿಮಾಲಯ ಪ್ರದೇಶಗಳಲ್ಲಿನ ಮಾಲಿನ್ಯದ ವರದಿಯನ್ನು IMF ಉತ್ತರಾಖಂಡ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಈಟಿವಿ ಭಾರತದೊಂದಿಗೆ ನಡೆಸಿದ ವಿಶೇಷ ಸಂವಾದದಲ್ಲಿ ಸುಧೀರ್ ಕುಟ್ಟಿ ತಿಳಿಸಿದರು.
ಸುಸ್ಥಿರ ಪ್ರವಾಸೋದ್ಯಮ ಅಗತ್ಯ: ಈ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದ್ದು, ಪ್ರವಾಸೋದ್ಯಮ ಆರಂಭಿಕ ಹಂತದಲ್ಲಿದೆ. ಉತ್ತರಾಖಂಡ ಸರ್ಕಾರವು ಈಗಿನಿಂದಲೇ ಸುಸ್ಥಿರ ಮಾದರಿ ಪ್ರವಾಸೋದ್ಯಮ ಪ್ರಾರಂಭಿಸಬೇಕು. ಓಂ ಪರ್ವತ ಮತ್ತು ಆದಿ ಕೈಲಾಸವನ್ನ ಸುಸ್ಥಿರ ಮಾದರಿಯಲ್ಲಿ ಅಭಿವೃದ್ಧಿಪಡಿಸದಿದ್ದರೆ ಬದರಿನಾಥ ಮತ್ತು ಕೇದಾರನಾಥದಲ್ಲಿ ಕಂಡು ಬರುತ್ತಿರುವ ಕಸದ ಸಮಸ್ಯೆ ಇಲ್ಲಿ ಸಹ ಕಾಣಿಸಿಕೊಂಡು ದೊಡ್ಡ ಹೊಡೆತ ಬೀಳುತ್ತದೆ ಎಂದರು.
ಇದನ್ನೂ ಓದಿ: ಸರ್ಕಾರಿ ಉದ್ಯೋಗಾಂಕ್ಷಿಗಳು ಶುದ್ಧ ಹಸ್ತರಾಗಿರಬೇಕು: ಹೈಕೋರ್ಟ್