ನವದೆಹಲಿ: ದೇಶದಲ್ಲಿ ಪ್ರಸಕ್ತ ನೈಋತ್ಯ ಮಾನ್ಸೂನ್ ಜೂನ್ 5ರಿಂದ ಆರಂಭವಾಗಲಿದ್ದು ಸೆಪ್ಟೆಂಬರ್ 30ರವರೆಗೆ ವಾಡಿಕೆಯ ಮಳೆಯಾಗಲಿದೆ. 50 ವರ್ಷಗಳ ಅವಧಿಯಲ್ಲಿನ ಮಳೆ ಮಾಹಿತಿಯ ಆಧಾರದ ಮೇಲೆ ಭಾರತೀಯ ಹವಾಮಾನ ಇಲಾಖೆ ಈ ಭವಿಷ್ಯ ನುಡಿದಿದೆ.
ದೇಶಾದ್ಯಂತ ಮಳೆ ಮಾಪಕಗಳ ಜಾಲಗಳಿಂದ ಕಲೆ ಹಾಕಿದ ಹೊಸ ಮಾಹಿತಿಯ ಆಧಾರದ ಮೇಲೆ ಮಳೆ ಪ್ರಮಾಣವನ್ನು ಇಲಾಖೆ ಅಂದಾಜಿಸಿದೆ. ಈ ಹಿಂದೆ 88 ಸೆಂ.ಮೀ. ಮಳೆ ನಿರೀಕ್ಷೆ ಹೊಂದಲಾಗಿತ್ತು. ಈಗ ಹೊಸ ಮಾಹಿತಿ ಲಭ್ಯತೆಯ ಮೇಲೆ 87 ಸೆಂ.ಮೀ. ಮಳೆಯ ಬೀಳುವ ಬಗ್ಗೆ ಅಂದಾಜಿಸಲಾಗಿದೆ.
ಮಳೆ ಮುನ್ಸೂಚನೆಗಾಗಿ ಭಾರತೀಯ ಹವಾಮಾನ ಇಲಾಖೆಯು ದೀರ್ಘಾವಧಿಯ ಸರಾಸರಿ (LPA)ಯನ್ನು ವಿಶ್ಲೇಷಿಸುತ್ತದೆ. 50 ವರ್ಷಗಳ ಅವಧಿಯಲ್ಲಿ ಮಳೆಯ ಮಾಹಿತಿಯ ಆಧಾರದ ಮೇಲೆ ಈ ಬಾರಿ ಸಾಮಾನ್ಯ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. 1961ರಿಂದ 2010ರ ಅವಧಿಯ ಮಾಹಿತಿ ಆಧಾರದ ಮೇಲೆ ಈ ಹಿಂದೆ 88 ಸೆಂ.ಮೀ. ಮಳೆಯ ನಿರೀಕ್ಷೆ ಹೊಂದಲಾಗಿತ್ತು. ಈಗ 1971ರಿಂದ 2020ರವರೆಗಿನ 50 ವರ್ಷಗಳ ಮಾಹಿತಿ ಆಧರಿಸಿ 87 ಸೆಂ.ಮೀ. ವಾಡಿಕೆ ಮಳೆ ಪ್ರಮಾಣವನ್ನು ಅಂದಾಜಿಸಲಾಗಿದೆ ಎಂದು ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ತಿಳಿಸಿದ್ದಾರೆ.
ಈ ಮಳೆ ಪ್ರಮಾಣವನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಲಾಗುತ್ತದೆ. 1961-2010ರ ಮಾಹಿತಿ ಪ್ರಕಾರ ಈ ಮೊದಲು 880.6 ಎಂಎಂ ಮಳೆ ನಿರೀಕ್ಷೆ ಇತ್ತು. ಈಗ 1971-2020ರ ಹೊಸ ಮಾಹಿತಿಯಡಿ ಈ ಮಳೆ ಪ್ರಮಾಣ 868.8 ಎಂಎಂ ಆಗಿದ್ದು, ಇದರಿಂದ ಒಟ್ಟಾರೆ ಈ ಮುಂಗಾರು ಹಂಗಾಮಿನಲ್ಲಿ ಸರಾಸರಿ 12 ಎಂಎಂ ಮಳೆ ಕಡಿಮೆಯಾಗಲಿದೆ. ದೇಶಾದ್ಯಂತ ಒಂದೇ ಸಮನಾದ ಮಳೆ ಇರಲಿದೆ. ಈಶಾನ್ಯ ರಾಜ್ಯಗಳು, ಕೇರಳ, ತಮಿಳುನಾಡು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್, ಹರಿಯಾಣ ಹಾಗೂ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ!