ಕೋಲ್ಕತ್ತಾ: "ನಾನು ಕಚ್ಚದ ಹಾವೆಂದು ತಿಳಿಯಬೇಡಿ. ನಾನು ನಾಗರ ಹಾವಿದ್ದಂತೆ, ನನ್ನ ಒಂದೇ ಒಂದು ಏಟಿಗೆ ಎದುಗಿದ್ದವರು ಫೋಟೋ ಫ್ರೇಮ್ ಆಗುತ್ತಾರೆ." ಎಂದು ಖ್ಯಾತ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸಿನಿಮೀಯವಾಗಿ ಹೇಳಿದ್ದಾರೆ.
ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ನಂತರ ಮಿಥುನ್ ಚಕ್ರವರ್ತಿ ಮಾತನಾಡಿದರು.
"ನಾನೊಬ್ಬ ಅಪ್ಪಟ ಬಂಗಾಳಿ ಮನುಷ್ಯ. ನೀವೆಲ್ಲ ನನ್ನ ಡೈಲಾಗ್ಗಳನ್ನು ಇಷ್ಟಪಡುತ್ತೀರೆಂಬುದು ಗೊತ್ತು. ನನ್ನ ಹೊಸ ಡೈಲಾಗ್ ಹೇಳುವೆ ಕೇಳಿ.. ನಾನು ಕಚ್ಚದ ಹಾವೆಂದು ಯಾರೂ ತಿಳಿಯಬೇಡಿ. ನಾನು ನಾಗರ ಹಾವು, ನಾನು ಕಚ್ಚಿದರೆ ನೀವು ಉಳಿಯಲಾರಿರಿ." ಎಂದು ನೆರೆದ ಜನರಿಗೆ ಸಿನಿಮೀಯ ಸ್ಟೈಲ್ನಲ್ಲಿ ಡೈಲಾಗ್ ಹೊಡೆದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ನನ್ನ ಕನಸು ನನಸಾದಂತೆ. ಇಷ್ಟು ದೊಡ್ಡ ಜನಸಭೆಯಲ್ಲಿ ಭಾಗವಹಿಸುತ್ತೇನೆಂದು ಅಂದುಕೊಂಡಿರಲಿಲ್ಲ. ದೇಶದ ಬಡವರಿಗಾಗಿ ಕೆಲಸ ಮಾಡುವ ನನ್ನ ಆಸೆ ಇಂದು ನೆರವೇರುತ್ತಿದೆ ಎಂದು ಮಿಥುನ್ ಚಕ್ರವರ್ತಿ ಹೇಳಿದರು.
70 ವರ್ಷದ ಖ್ಯಾತ ಬಾಲಿವುಡ್ ನಟ ಹಾಗೂ ಮಾಜಿ ಟಿಎಂಸಿ ಮುಖಂಡ ಮಿಥುನ್ ಚಕ್ರವರ್ತಿಗೆ ಪಶ್ಚಿಮ ಬಂಗಾಳದಲ್ಲಿ ಬಹುದೊಡ್ಡ ಅಭಿಮಾನಿಗಳ ಪಡೆಯೇ ಇದೆ. ಸದ್ಯ ಅವರು ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ನಡೆಯುತ್ತಿದೆ.