ಮುಂಬೈ(ಮಹಾರಾಷ್ಟ್ರ): ಐಐಟಿ-ಬಾಂಬೆಯ ಕಾಲೇಜಿನಲ್ಲಿ ಬಿ.ಟೆಕ್ ಮೆಕ್ಯಾನಿಕಲ್ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ದರ್ಶನ್ ಸೋಲಂಕಿ ಎಂದು ಗುರುತಿಸಲಾಗಿದ್ದು, ಇವರು ಗುಜರಾತ್ ರಾಜ್ಯದ ಅಹಮದಾಬಾದ್ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿ ನಗರದ ಪೊವಾಯಿ ಪ್ರದೇಶದಲ್ಲಿರುವ ಐಐಟಿ-ಬಾಂಬೆ ಕ್ಯಾಂಪಸ್‌ನಲ್ಲಿ ಪ್ರಥಮ ವರ್ಷದ ಬಿ.ಟೆಕ್ ಮೆಕ್ಯಾನಿಕಲ್ ವಿದ್ಯಾರ್ಥಿ ಆಗಿದ್ದರು.
ಮೃತ ದರ್ಶನ್ ಸೋಲಂಕಿ ಮೂರು ತಿಂಗಳ ಹಿಂದೆಯಷ್ಟೇ ಈ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆದಿದ್ದರು. ಆದರೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರವಾದ ಮಾಹಿತಿ ಹೊರಬಂದಿಲ್ಲ. ಜೊತೆಗೆ ತನಿಖೆ ವೇಳೆ ಅವರ ಕೋಣೆಯಲ್ಲಿಯೂ ಯಾವುದೇ ರೀತಿಯ ಸೂಸೈಡ್ ನೋಟ್ ಕೂಡ ಪತ್ತೆಯಾಗಿಲ್ಲ. ಸದ್ಯ ಈ ಘಟನೆಯು ಇಡೀ ಕಾಲೇಜಿನಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸರಿಂದ ತೀವ್ರ ತನಿಖೆ ನಡೆಯುತ್ತಿದೆ.
ಘಟನೆ ನಡೆದ ನಂತರ ದರ್ಶನ್ ಸೋಲಂಕಿಯ ಮೃತ ದೇಹವನ್ನು ಮೊದಲು ಹಾಸ್ಟೆಲ್ ಕಟ್ಟಡದ ಭದ್ರತಾ ಸಿಬ್ಬಂದಿಗಳು ನೋಡಿ ಗುರುತಿಸಿದ್ದು, ಸಂಸ್ಥೆಯ ಅಧಿಕಾರಿಗಳು ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸರು ಇಡೀ ಕ್ಯಾಂಪಸ್‌ನ್ನು ಪರಿಶೀಲಿಸಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೊ ಎಂಬ ಅನುಮಾನದ ಇರುವುದರಿಂದ ಬಿಗಿ ಭದ್ರತೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.
ಹಾಸ್ಟೆಲ್ನಲ್ಲಿ ಆತ್ಮಹತ್ಯೆಗೆ ಒಳಗಾದ ‘ವಿದ್ಯಾರ್ಥಿ’ ಕಂಡು ವಾರ್ಡನ್ ಸಾವು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ವಸತಿನಿಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದನ್ನು ಕಂಡ ಅದೇ ಹಾಸ್ಟೆಲ್ ವಾರ್ಡನ್ ಆಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ತಿರುಪತಿ ಜಲ್ಲೆಯಲ್ಲಿ ನಡೆದಿತ್ತು.
ಕೆನ್ನೆಗೆ ಭಾರಿಸಿದ ತಾಯಿ, ಮಗ ಆತ್ಮಹತ್ಯೆ: ಉತ್ತರಪ್ರದೇಶದ ಲಕ್ನೋದಲ್ಲಿ ತನ್ನ ಮಕ್ಕಳಿಬ್ಬರೂ ಟಿವಿಯಲ್ಲಿ ಚಾನೆಲ್ ಬದಲಾಯಿಸಿಕೊಳ್ಳುವ ವಿಚಾರಕ್ಕೆ ಜಗಳ ಮಾಡಿಕೊಂಡದಕ್ಕಾಗಿ ತಾಯಿಯು ದೊಡ್ಡ ಮಗನ ಕೆನ್ನೆಗೆ ಭಾರಿಸಿದ್ದಾಳೆ. ಇದರಿಂದ ಮನನೊಂದ ಮಗ ಕೋಣೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ಬಾಲಕನ ಹೆಸರು ಆಯುಶ್ಮಾನ್. ತಂದೆಯ ಸಾವಿನ ಬಳಿಕ ತಾಯಿ ರುಮಿಕಾ ತನ್ನಿಬ್ಬರು ಮಕ್ಕಳೊಂದಿಗೆ ಲಕ್ನೋದ ವಿಷನ್ ವೆಗ್ನಲ್ಲಿ ವಾಸಿಸುತ್ತಿದ್ದರು. ರಾತ್ರಿ ವೇಳೆ ರುಮಿಕಾ ಮನೆಗೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಕ್ಕಳಿಬ್ಬರೂ ಕೋಣೆಯಲ್ಲಿ ಟಿವಿ ನೋಡುತ್ತಿದ್ದರು.
ತಮ್ಮ ಅಂಶುಮಾನ್ ಕಾರ್ಟುನ್ ನೋಡುತ್ತಿದ್ದಾಗ ಅಣ್ಣ ಆಯುಶ್ಮಾನ್ ಚಾನೆಲ್ ಬದಲಾಯಿಸಿದರಿಂದ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ತಾಯಿ ರುಮಿಕಾ ದೊಡ್ಡಮಗ ಆಯುಶ್ಮಾನ್ ನ ಕೆನ್ನೆಗೆ ಭಾರಿಸಿದ್ದು ಇದರಿಂದ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ. ಮಗ ಬರದೆ ಇದ್ದುದನ್ನು ಕಂಡ ತಾಯಿ ಬಾಗಿಲು ಬಡಿದರೂ ತೆರೆಯದೇ ಇದ್ದಾಗ ಕಿಟಕಿಯಿಂದ ನೋಡಿದ್ದಾಳೆ. ಕೋಣೆಯಲ್ಲಿ ಮಗ ಸಾವನ್ನಪ್ಪಲು ಪ್ರಯತ್ನಿಸುತ್ತಿರುವುದನ್ನು ಕಂಡ ತಾಯಿ ಎಷ್ಟೇ ಕೇಳಿಕೊಂಡರು ಮಗ ಕೊನೆಗೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೊಬ್ಬೆ ಕೇಳಿ ಓಡಿ ಬಂದ ಸ್ಥಳೀಯರು ಬಾಗಿಲು ಮುರಿಯಲು ಪ್ರಯತ್ನಿಸಿದರು ಆದರೆ ಅದು ಕಬ್ಬಿಣದ ಬಾಗಿಲಾದ್ದರಿಂದ ತುಸು ಲೇಟಾಗಿತ್ತು. ನಂತರ ಗ್ಯಾಸ್ ಸಿಲಿಂಡರ್ನಿಂದ ಬಾಗಿಲಿಗೆ ಹೊಡೆದು ತೆರೆಯಾಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಆಯುಶ್ಮಾನ್ನ ಆಯಸ್ಸೇ ಮುಗಿದಿತ್ತು.
ಇದನ್ನೂ ಓದಿ; ಅಂಬೇಡ್ಕರ್ಗೆ ಅವಮಾನ ಆರೋಪ: ಜೈನ್ ವಿವಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್, ತನಿಖೆಗೆ ಸಚಿವರ ಸೂಚನೆ