ವನಪರ್ತಿ (ತೆಲಂಗಾಣ): ಹಣ ಕಂಡರೆ ಹೆಣವೂ ಬಾಯ್ಬಿಡುವ ಈ ಕಾಲದಲ್ಲಿ ನೂರಕ್ಕೆ 500 ರೂ., ಸಾವಿರಕ್ಕೆ 5000 ರೂ. ಸಿಗತ್ತೆ ಅಂದ್ರೆ ಯಾರು ತಾನೇ ಸುಮ್ಮನಿರುತ್ತಾರೆ. ದುಡ್ಡಿನ ವರ ನೀಡುತ್ತಿರುವ ಎಟಿಎಂ ಲಾಭ ಪಡೆದ ಜನ ಫುಲ್ ಖುಷ್ ಆಗಿದ್ದಾರೆ.
ತೆಲಂಗಾಣದ ವನಪರ್ತಿ ಜಿಲ್ಲೆಯ ಅಮರಚಿಂಥ ಮಂಡಲದಲ್ಲಿರುವ ಇಂಡಿಯಾ ಬ್ಯಾಂಕ್ ಎಟಿಎಂನಲ್ಲಿ ಕಳೆದ ಮೂರು ದಿನಗಳಿಂದ ತಾಂತ್ರಿಕ ದೋಷ ಎದುರಾಗಿದೆ. 100 ರೂ. ಹಣ ವಿತ್ಡ್ರಾ ಮಾಡಿದ್ರೆ 500 ರೂ. ಹಾಗೂ ಒಂದು ಸಾವಿರ ರೂ. ಡ್ರಾ ಮಾಡಿದ್ರೆ 5000 ರೂ. ಬರುತ್ತಿದೆ. ಹಾಗಂತ ಜನರ ಖಾತೆಯಿಂದ ಹಣವೇನೂ ಕಟ್ ಆಗುತ್ತಿಲ್ಲ. ಇದರಿಂದ ಸಂತೋಷಗೊಂಡ ಗ್ರಾಮಸ್ಥರು ಎಟಿಎಂಗೆ ಮುಗಿಬಿದ್ದು, ಐದು ಪಟ್ಟು ಹೆಚ್ಚು ಹಣ ಪಡೆದು, ಈ ವಿಚಾರವನ್ನ ರಹಸ್ಯವಾಗಿಡುತ್ತಿದ್ದಾರಂತೆ.
ಇದೇ ರೀತಿ ಕಳೆದ ಮೂರು ದಿನಗಳಿಂದ ಜನರು ಹಣ ಡ್ರಾ ಮಾಡುತ್ತಿದ್ದು, ನಿನ್ನೆ ಎಟಿಎಂ ಮುಂದಿನ ಉದ್ದದ ಸರತಿ ಸಾಲನ್ನು ನೋಡಿದ ಪೊಲೀಸರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಎಟಿಎಂ ಕ್ಲೋಸ್ ಮಾಡಿ, ಎಟಿಎಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಎಟಿಎಂನಲ್ಲಿ 100 ರೂ. ನೋಟುಗಳ ಜಾಗದಲ್ಲಿ 500 ರೂ. ನೋಟುಗಳನ್ನು ಇಟ್ಟಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಹಣ ಪಡೆದ ಖಾತೆಗಳನ್ನು ಪತ್ತೆ ಮಾಡಿ, ಜನರಿಂದ ಮರಳಿ ಪಡೆಯುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.