ಕೋಲ್ಕತ್ತಾ: ಮತ್ತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳವು ಕಾಶ್ಮೀರವಾಗಿ ಬದಲಾಗಲಿದೆ ಎಂದು ಬಿಜೆಪಿ ಮುಖಂಡ, ನಂದಿಗ್ರಾಮ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ ಹೇಳಿದ್ದಾರೆ.
ನಿನ್ನೆ ಬೆಹಾಲಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸುವೇಂದು ಅಧಿಕಾರಿ, ಶ್ಯಾಮ್ ಪ್ರಸಾದ್ ಮುಖರ್ಜಿ ಇಲ್ಲದಿದ್ದರೆ ಭಾರತ ಇಸ್ಲಾಮಿಕ್ ದೇಶವಾಗುತ್ತಿತ್ತು, ನಾವು ಬಾಂಗ್ಲಾದೇಶದಲ್ಲಿ ವಾಸಿಸಬೇಕಾಗುತ್ತಿತ್ತು. ಟಿಎಂಸಿ ಏನಾದರೂ ಮತ್ತೆ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳವು ಕಾಶ್ಮೀರವಾಗುವುದು ಖಚಿತ ಎಂದು ದೀದಿ ವಿರುದ್ಧ ವಾಗ್ದಾಳಿ ನಡೆಸಿದರು.
ದೀದಿನ ಸೋಲಿಸೋಕೆ ನಂದಿಗ್ರಾಮಕ್ಕೆ ಹೋಗುತ್ತಿರುವೆ
ನಂದಿಗ್ರಾಮ ನನಗೆ ಸವಾಲಾಗಿಲ್ಲ. ಮಮತಾ ಬ್ಯಾನರ್ಜಿಯನ್ನು ಸೋಲಿಸಿ, ಅವರನ್ನು ಮತ್ತೆ ಕೋಲ್ಕತ್ತಾಗೆ ಕಳುಹಿಸಲು ಅಲ್ಲಿಗೆ ಹೋಗುತ್ತಿದ್ದೇನೆ. ಈ ಜವಾಬ್ದಾರಿ ನೀಡಿದ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ. 50,000 ಮತಗಳ ಅಂತರದಿಂದ ಮಮತಾ ಸೋಲನುಭವಿಸಲಿದ್ದಾರೆ ಎಂದು ಸುವೇಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಎಂಟು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಟಿಎಂಸಿಗೆ ಕೈಕೊಟ್ಟು ಬಿಜೆಪಿಗೆ ಸೇರಿದ್ದ ಸುವೇಂದು ಅಧಿಕಾರಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.