ಪಾಟ್ನಾ: ಅತ್ಯಾಚಾರ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸದಿದ್ದರೆ ಮತ್ತು ಆಕೆಯ ಖಾಸಗಿ ಅಂಗಗಳಿಗೆ ಯಾವುದೇ ಹಾನಿಯಾಗಿರುವ ಬಗ್ಗೆ ಸಾಕ್ಷಿಗಳಿಲ್ಲದಿದ್ದರೆ ಮಹಿಳೆ/ಯುವತಿಯ ಸಮ್ಮತಿ ಇದೆ ಎಂದರ್ಥವಲ್ಲ ಎಂದು ಹೈಕೋರ್ಟ್ ಅತ್ಯಾಚಾರ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆ ಹೈಕೋರ್ಟ್ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ?: ಈ ಪ್ರಕರಣವು ಜಮುಯಿ ಜಿಲ್ಲೆಯ ಗ್ರಾಮವೊಂದರದ್ದಾಗಿದೆ. ಅಲ್ಲಿ 9 ಏಪ್ರಿಲ್ 2015 ರಂದು ಮಾಲೀಕ ಇಸ್ಲಾಂ ಮಿಯಾನ್ ಇಟ್ಟಿಗೆ ಭಟ್ಟಿಯಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿದ ಬಳಿಕ ಸಂತ್ರಸ್ತೆ ಕೂಲಿ ಕೇಳಲು ಇಟ್ಟಿಗೆ ಭಟ್ಟಿ ಮಾಲೀಕರ ಬಳಿ ಹೋಗಿದ್ದರು. ಈ ವೇಳೆ ಇಸ್ಲಾಂ ಮಿಯಾನ, ನಂತರ ಹಣ ನೀಡುವುದಾಗಿ ಹೇಳಿದ್ದರು.
ನಂತರ ಹಣ ನೀಡುತ್ತೇನೆ ಎಂದಿದ್ದ ಇಸ್ಲಾಂ ಮಿಯಾನ್, ರಾತ್ರಿ ವೇಳೆ ಮಹಿಳೆ ಮನೆಗೆ ಹೋಗಿದ್ದ. ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಮಗುವನ್ನು ತಾಯಿಯ ಬಗ್ಗೆ ವಿಚಾರಿಸಿದ್ದ. ಅಷ್ಟರಲ್ಲೇ ಮಹಿಳೆ ಕಾಣಿಸಿದ್ದರಿಂದ ಮಿಯಾನ್ ಅವರನ್ನು ಬಲವಂತವಾಗಿ ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಈ ವೇಳೆ ಸಂತ್ರಸ್ತೆ ಕೂಗಾಡಿದ ಶಬ್ಧ ಕೇಳಿದ ಗ್ರಾಮಸ್ಥರು ಅವರ ರಕ್ಷಣೆಗೆ ದೌಡಾಯಿಸಿ ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಈ ಪ್ರಕರಣದ ವಿಚಾರಣೆ ಕೆಳ ನ್ಯಾಯಾಲಯದಲ್ಲಿ ನಡೆದಿತ್ತು.
ಓದಿ: 1,428 ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ನೀಡಲು ವಿಫಲ: ಕಂದಾಯ ಇಲಾಖೆ ವಿರುದ್ಧ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ
10 ವರ್ಷ ಜೈಲು, 10 ಸಾವಿರ ದಂಡ: ಈ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿರುವುದು ಸಾಬೀತಾಗಿದೆ. ಆರೋಪಿ ಅಪರಾಧಿ ಎಂದು ಪರಿಗಣಿಸಲಾಗಿದ್ದು, ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ಹಾಕಿ ಕೆಳ ನ್ಯಾಯಾಲಯ ತೀರ್ಪು ನೀಡಿತ್ತು. ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ನಲ್ಲಿ ಆರೋಪಿ ಮಿಯಾನ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಆರೋಪಿ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್ ವಾದ ಪ್ರತಿವಾದ ಆಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ನೀಡಿರುವ ಹೇಳಿಕೆ ನಂಬಲರ್ಹ ಮತ್ತು ಸರಿ ಎಂದು ಕೆಳ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಅತ್ಯಾಚಾರವನ್ನು ಪರಸ್ಪರ ಒಪ್ಪಿಗೆ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ಪರಸ್ಪರ ಒಪ್ಪಿಗೆಯ ನಂತರವೇ ಅವರ ಸ್ವಂತ ಇಚ್ಛೆಯ ಮೇಲೆ ಲೈಂಗಿಕ ಸಂಬಂಧಗಳನ್ನು ಸ್ಥಾಪಿಸಬಹುದು ಎಂದು ಐಪಿಸಿಯ ಸೆಕ್ಷನ್ 375 ರಲ್ಲಿ ಸ್ಪಷ್ಟವಾಗಿದೆ. ಅತ್ಯಾಚಾರದ ಸಮಯದಲ್ಲಿ ಸಂತ್ರಸ್ತೆ ದೈಹಿಕವಾಗಿ ವಿರೋಧ ವ್ಯಕ್ತಪಡಿಸಿಲ್ಲ ಎಂಬುದಕ್ಕೆ ಸಾಕ್ಷ್ಯಾಧಾರಗಳ ಕೊರತೆ ಉಂಟಾದಲ್ಲಿ ಆಕೆಯ ಒಪ್ಪಿಗೆಯನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂತ್ರಸ್ತೆ ಅತ್ಯಾಚಾರದ ಸಮಯದಲ್ಲಿ ವಿರೋಧ ವ್ಯಕ್ತಪಡಿಸಿದಿದ್ದರೆ ಅಥವಾ ಆಕೆಯ ಖಾಸಗಿ ಅಂಗಗಳಿಗೆ ಹಾನಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲದಿದ್ದರೆ ಅದು ಸಂತ್ರಸ್ತೆಯ ಸಮ್ಮತಿ ಇದೆ ಎಂದು ಅರ್ಥವಾಗುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ನ ನ್ಯಾಯಮೂರ್ತಿ ಎಎಂ ಬದರ್ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ತಳ್ಳಿ ಹಾಕಿದ್ದು, ಕೆಳ ನ್ಯಾಯಾಲಯದ ತೀರ್ಪುನ್ನು ಎತ್ತಿಹಿಡಿದಿದೆ.