ನವದೆಹಲಿ: ಭಾರತದ ಸುಪ್ರೀಂಕೋರ್ಟ್ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಕೆಲಸ ಆರಂಭಿಸಬೇಕೆಂದು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಹೇಳಿದ್ದಾರೆ. ಶುಕ್ರವಾರದಂದು ಮೂವರು ನ್ಯಾಯಮೂರ್ತಿಗಳ ಪೀಠ, ನಿಗದಿತ ಸಮಯಕ್ಕೂ ಒಂದು ಗಂಟೆ ಮುಂಚೆ ವಿಚಾರಣೆಯ ಕಾರ್ಯಕಲಾಪ ಆರಂಭಿಸಿದ ಸಂದರ್ಭದಲ್ಲಿ ಅವರು ಈ ಮಾತು ಹೇಳಿದ್ದಾರೆ.
ಆಗಸ್ಟ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಲಿರುವ ನ್ಯಾಯಮೂರ್ತಿ ಲಲಿತ್ ಇಂದು ಬೆಳಗ್ಗೆ 9.30ಕ್ಕೆ ವಿಚಾರಣೆಯ ಕೆಲಸ ಆರಂಭಿಸಿದರು. ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ನಲ್ಲಿ ಬೆಳಗ್ಗೆ 10.30 ಕ್ಕೆ ವಿಚಾರಣೆಗಳು ಆರಂಭವಾಗುತ್ತವೆ. "ಮಕ್ಕಳು ಬೆಳಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಮೂರ್ತಿಗಳಾದ ನಾವು ಬೆಳಗ್ಗೆ 9.30ರ ಹೊತ್ತಿಗೆ ವಿಚಾರಣೆ ಆರಂಭಿಸುವುದು ಏಕೆ ಸಾಧ್ಯವಿಲ್ಲ?" ಎಂದು ಅವರು ಹೇಳಿದರು.
ಬೆಳಗ್ಗೆ ಬೇಗ ವಿಚಾರಣೆ ಆರಂಭಿಸಿದ್ದಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸಂತಸ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಯು.ಯು.ಲಲಿತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೋರ್ಟ್ ಸಂಖ್ಯೆ 2 ರಲ್ಲಿ ಶುಕ್ರವಾರ ನ್ಯಾ.ಲಲಿತ್ ಅವರೊಂದಿಗೆ ನ್ಯಾ.ಎಸ್. ರವೀಂದ್ರ ಮತ್ತು ಸುಧಾಂಶು ಧುಲಿಯಾ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡರು.
ಸುದೀರ್ಘ ವಿಚಾರಣೆ ಅಗತ್ಯವಿಲ್ಲದಿದ್ದಾಗ, ಸುಪ್ರೀಂಕೋರ್ಟ್ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕು ಮತ್ತು 11:30 ಕ್ಕೆ ಅರ್ಧ ಗಂಟೆಯ ವಿರಾಮಕ್ಕಾಗಿ ಎದ್ದೇಳಬೇಕು. ನ್ಯಾಯಮೂರ್ತಿಗಳು ಮಧ್ಯಾಹ್ನ ಮತ್ತೆ ಕೆಲಸ ಪ್ರಾರಂಭಿಸಬಹುದು ಮತ್ತು 2 ಗಂಟೆಗೆ ಮುಗಿಸಬಹುದು ಎಂದು ನ್ಯಾಯಮೂರ್ತಿ ಲಲಿತ್ ಸಲಹೆ ನೀಡಿದರು.
ವಾರದಲ್ಲಿ ಐದು ದಿನ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಬೆಳಗ್ಗೆ 10.30 ಕ್ಕೆ ಪ್ರಕರಣಗಳ ವಿಚಾರಣೆಯನ್ನು ಪ್ರಾರಂಭಿಸುತ್ತಾರೆ ಮತ್ತು ಸಂಜೆ 4 ರವರೆಗೆ ಮುಂದುವರಿಸುತ್ತಾರೆ. ಮಧ್ಯಾಹ್ನ 1 ರಿಂದ 2 ರವರೆಗೆ ಒಂದು ಗಂಟೆಯ ಊಟದ ವಿರಾಮ ತೆಗೆದುಕೊಳ್ಳಲಾಗುತ್ತದೆ.