ಚೆನ್ನೈ: 1929ರಲ್ಲಿ ತಮಿಳುನಾಡಿನ ನಾಗಪಟ್ಟಿಣಂ ದೇವಸ್ಥಾನವೊಂದರಿಂದ ಕಳವಾಗಿದ್ದ ಮೂರೂವರೆ ಅಡಿಯ ಚೋಳ ರಾಣಿ ಸೆಂಬಿಯನ್ ಮಹಾದೇವಿ ವಿಗ್ರಹವು ಅಮೆರಿಕದ ವಾಶಿಂಗ್ಟನ್ ಡಿಸಿಯ ಫ್ರೀಯರ್ ಆರ್ಟ್ ಗ್ಯಾಲರಿಯಲ್ಲಿರುವುದು ಪತ್ತೆಯಾಗಿದೆ. ವಿಗ್ರಹವನ್ನು ಮರಳಿ ಭಾರತಕ್ಕೆ ತರಲು ವಿಗ್ರಹ ಪತ್ತೆ ದಳ ಪೊಲೀಸರು ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಅಂದವಾದ ಕಂಚಿನ ಈ ವಿಗ್ರಹವನ್ನು 1929 ರಲ್ಲಿ ನ್ಯೂಯಾರ್ಕ್‌ನ ಹ್ಯಾಗೊಪ್ ಕೆವೊರ್ಕಿಯಾನ್ ಎಂಬಾತನಿಂದ ಫ್ರೀಯರ್ ಆರ್ಟ್ ಗ್ಯಾಲರಿಯು ರಹಸ್ಯ ಬೆಲೆಗೆ ಖರೀದಿಸಿದೆ ಎಂದು ಪೊಲೀಸ್ ಮಹಾನಿರ್ದೇಶಕ ಕೆ. ಜಯಂತ್ ಮುರಳಿ ಹೇಳಿದ್ದಾರೆ. ಕೆವೊರ್ಕಿಯಾನ್ 1962 ರಲ್ಲಿ ನಿಧನರಾದರು. ಯಾರಿಂದ, ಎಷ್ಟು ಮೊತ್ತಕ್ಕೆ ಮತ್ತು ಹೇಗೆ ಆತ ಈ ವಿಗ್ರಹ ಪಡೆದುಕೊಂಡಿದ್ದ ಎಂಬುದು ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಡಿಜಿಪಿ ತಿಳಿಸಿದರು.
2015ರಲ್ಲಿ ಫ್ರೀಯರ್ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದ್ದಾಗ ಅಲ್ಲಿ ತಾನು ಸೆಂಬಿಯನ್ ಮಹಾದೇವಿಯ ವಿಗ್ರಹವನ್ನು ಕಂಡಿದ್ದಾಗಿ ಮೊಟ್ಟ ಮೊದಲಿಗೆ ಎಲೆಫಂಟ್ ರಾಜೇಂದ್ರನ್ ಎಂಬಾತ 2018ರಲ್ಲಿ ಪೊಲೀಸರಿಗೆ ತಿಳಿಸಿದ್ದ. ಅಲ್ಲದೇ ಈ ಮಾಹಿತಿಯನ್ನು ಆತ, ನಾಗಪಟ್ಟಿಣಂ ನಿಂದ 25 ಕಿಲೋಮೀಟರ್ ದೂರದ ಗ್ರಾಮದಲ್ಲಿರುವ ಸೆಂಬಿಯನ್ ಮಹಾದೇವಿಯ ಕೈಲಾಸನಾಥ ಸ್ವಾಮಿ ಶಿವನ್ ದೇವಸ್ಥಾನದವರಿಗೂ ತಿಳಿಸಿದ್ದ.
ನಂತರ ಪ್ರಕರಣವನ್ನು ವಿಗ್ರಹ ತನಿಖಾ ದಳ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಡಿಜಿಪಿ ಜಯಂತ್ ಮುರಳಿ, ಪೊಲೀಸ್ ಅಧಿಕಾರಿ ಆರ್. ದಿನಗರನ್, ಎಸ್ಪಿ ಬಿ.ರವಿ ಪ್ರಕರಣದ ತನಿಖೆ ಕೈಗೊಂಡಿದ್ದರು. ತನಿಖಾ ತಂಡದ ಮುಖ್ಯಸ್ಥೆ ಶ್ರೀಮತಿ ಇಂದಿರಾ, ಕೈಲಾಸನಾಥ ಸ್ವಾಮಿ ದೇವಸ್ಥಾನದಲ್ಲಿನ ಶಿಲಾ ಬರಹಗಳನ್ನು ಭಾರತೀಯ ಪುರಾತತ್ವ ಇಲಾಖೆಯ ತಜ್ಞರಿಂದ ಓದಿಸಿದ್ದರು.
ಎಲ್ಲೆಡೆಯಿಂದ ಮಾಹಿತಿ ಸಂಗ್ರಹ: ದೇವಸ್ಥಾನದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿರುವವರಿಂದಲೂ ಮಾಹಿತಿ ಸಂಗ್ರಹಿಸಿದ್ದರು. ಚೋಳ ಚಕ್ರವರ್ತಿ ಕಾಂತರಾದಿತ್ಯ ತೇವರ್ ಈತ ಚೋಳ ರಾಣಿ ಸೆಂಬಿಯನ್ ಮಹಾದೇವಿಯ ಪತಿ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ದಂಪತಿಗೆ ಉತ್ತಮಾ ಚೋಳ ತೇವರ್ ಮತುರಂಥಾಗಾ ತೇವರ್ ಎಂಬ ಮಗನೂ ಇದ್ದನಂತೆ. ಸೆಂಬಿಯನ್ ಮಹಾದೇವಿ ಅಡಿಗಲಾರ್ ಅವರು 15 ವರ್ಷದವರಾಗಿದ್ದಾಗ ಪತಿಯನ್ನು ಕಳೆದುಕೊಂಡರು ಮತ್ತು ಆಗ ಮಗನಿಗೆ ಒಂದು ವರ್ಷ ವಯಸ್ಸಾಗಿತ್ತು ಎಂಬುದು ತಿಳಿದು ಬಂದಿದೆ.
ಹಿನ್ನೆಲೆ ಏನು?: ತನ್ನ ಗಂಡನ ಮರಣದ ನಂತರ, ರಾಣಿ ತನ್ನ ಜೀವನವನ್ನು ದೇವಾಲಯಗಳನ್ನು ನಿರ್ಮಿಸಲು ಮತ್ತು ಕಲೆ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಳು. ಇವಳ ಕಾಲದಲ್ಲಿಯೇ ಇಟ್ಟಿಗೆಯ ದೇವಾಲಯಗಳನ್ನು ಗ್ರಾನೈಟ್ ದೇವಾಲಯಗಳಾಗಿ ಪರಿವರ್ತಿಸಲಾಯಿತು. ಅವರು ಚೋಳ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ರಾಣಿಗಳಲ್ಲಿ ಒಬ್ಬರಾಗಿದ್ದರು.
60 ವರ್ಷಗಳ ತಮ್ಮ ಅವಧಿಯಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿದರು ಮತ್ತು ದಕ್ಷಿಣ ಭಾರತದ ಅನೇಕ ದೇವಾಲಯಗಳಿಗೆ ಉದಾರ ಉಡುಗೊರೆಗಳನ್ನು ನೀಡಿದರು. ವಿಗ್ರಹ ಪತ್ತೆ ದಳ ವಿಭಾಗವು ಸೆಂಬಿಯನ್ ಮಹಾದೇವಿಯ ವಿಗ್ರಹವನ್ನು ಯುನೆಸ್ಕೋ ಒಪ್ಪಂದದ ಅಡಿಯಲ್ಲಿ ಹಿಂಪಡೆಯಲು ಮತ್ತು ಕೈಲಾಸನಾಥ ದೇವಸ್ಥಾನದಲ್ಲಿ ಅದನ್ನು ಮರುಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಮುರಳಿ ಹೇಳಿದರು.