ಭೋಪಾಲ್ (ಮಧ್ಯಪ್ರದೇಶ) : ಭಾರತವು ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಜನಸಂಖ್ಯಾ ಸ್ಫೋಟವು ದೇಶಕ್ಕೆ ಮಾರಕ ಎಂಬ ವಾದದ ಜೊತೆಗೆ, ಕಡಿಮೆ ಸಂಖ್ಯಾಬಲ ಹೊಂದಿರುವ ಸಮುದಾಯಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಕರೆ ನೀಡುತ್ತಿವೆ. ಇದೀಗ, ಮಧ್ಯಪ್ರದೇಶದ ಬ್ರಾಹ್ಮಣ ಮಂಡಳಿಯು 4 ಮಕ್ಕಳನ್ನು ಹೆತ್ತ ದಂಪತಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.
ಮಧ್ಯಪ್ರದೇಶ ಸರ್ಕಾರದ ಅಧೀನದಲ್ಲಿರುವ ಬ್ರಾಹ್ಮಣ ಮಂಡಳಿಯು ಯುವ ದಂಪತಿಗಳಿಗೆ ಬಂಪರ್ ಆಫರ್ ನೀಡಿದೆ. ಯಾವುದೇ ದಂಪತಿ ನಾಲ್ಕು ಮಕ್ಕಳನ್ನು ಪಡೆದಲ್ಲಿ ಅವರಿಗೆ ಮಂಡಳಿ ಕಡೆಯಿಂದ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದೆ.
ಪರಶುರಾಮ ಕಲ್ಯಾಣ ಮಂಡಳಿಯ (ಬ್ರಾಹ್ಮಣ ಸಮುದಾಯ) ಅಧ್ಯಕ್ಷ ಪಂಡಿತ್ ವಿಷ್ಣು ರಾಜೋರಿಯಾ ಅವರು ಇಂಥದ್ದೊಂದು ಹೇಳಿಕೆಯನ್ನು ಹೊರಡಿಸಿದ್ದಾರೆ. ಇಂದೋರ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನಮ್ಮ ಕುಟುಂಬಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ್ದರಿಂದ ಸಮಾಜದಲ್ಲಿ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ನಾವು ಕುಟುಂಬವನ್ನು ಬೆಳೆಸಬೇಕಿದೆ" ಎಂದಿದ್ದಾರೆ.
ಸಮಾಜ, ದೇಶ ರಕ್ಷಣೆ: "ಈಗಿನ ಯುವ ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದಬೇಕು. ಈ ಮೂಲಕ ಸಮುದಾಯ ಮತ್ತು ದೇಶ ರಕ್ಷಣೆ ಸಾಧ್ಯವಾಗುತ್ತದೆ. ನನ್ನ ಮಾತನ್ನ ಸಮುದಾಯದ ಯುವಕರು ಎಚ್ಚರಿಕೆಯಿಂದ ಆಲಿಸಬೇಕು. ಒಂದೇ ಮಗು ಹೊಂದುವ ನೀತಿಯಿಂದ ಹೊರಬರಬೇಕು. ಕನಿಷ್ಠ ನಾಲ್ಕು ಮಕ್ಕಳನ್ನು ನೀವು ಹೊಂದಲು ಒತ್ತಾಯಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
"ಹಾಗೊಂದು ವೇಳೆ, ಯಾವುದೇ ದಂಪತಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದೇ ಆದಲ್ಲಿ, ಅವರಿಗೆ ಪರಶುರಾಮ ಮಂಡಳಿಯು (ಬ್ರಾಹ್ಮಣ ಮಂಡಳಿ) 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಿದೆ. ನಾನು ಮಂಡಳಿಯ ಅಧ್ಯಕ್ಷನಾಗಿ ಇರುವವರೆಗೂ ಮತ್ತು ಮುಂದಿನ ದಿನಗಳಲ್ಲಿಯೂ ಈ ನೆರವು ನೀಡಲಾಗುವುದು" ಎಂದು ಭರವಸೆ ನೀಡಿದ್ದಾರೆ.
"ಮಕ್ಕಳಿಗೆ ಶಿಕ್ಷಣ ಕೊಡಿಸುವುದು ದುಬಾರಿಯಾಗಿದೆ ಎಂದು ಹಲವು ದಂಪತಿ ಹಲಬುತ್ತಾರೆ. ಯಾವುದೋ ಒಂದು ಕಾರಣಕ್ಕಾಗಿ ಮಕ್ಕಳನ್ನು ಪಡೆಯುವುದನ್ನು ನಿಲ್ಲಿಸಬೇಡಿ. ಕೆಲಸ ಸಮಸ್ಯೆಗಳನ್ನು ಹೇಗೋ ನಿಭಾಯಿಸಿ. ಮಕ್ಕಳಿಗೆ ಜನ್ಮ ನೀಡಲು ನಿರಾಕರಿಸಿದಲ್ಲಿ ಈ ದೇಶ ಧರ್ಮದ್ರೋಹಿಗಳ ಕೈವಶವಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ವಿರೋಧ: ಬ್ರಾಹ್ಮಣ ಮಂಡಳಿಯ ಅಧ್ಯಕ್ಷರ ಈ ಹೇಳಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಪಕ್ಷದ ಮುಖಂಡ ಮುಖೇಶ್ ನಾಯಕ್ ಮಾತನಾಡಿ, "ರಾಜೋರಿಯಾ ಅವರು ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಬೇಕು. ಅವರೊಬ್ಬ ವಿದ್ವಾಂಸರು. ಜನಸಂಖ್ಯಾ ಬೆಳವಣಿಗೆಯು ವಿಶ್ವದ ಮಾರಕ ಸಮಸ್ಯೆಗಳಲ್ಲಿ ಒಂದಾಗಿದೆ. ಮಕ್ಕಳು ಕಡಿಮೆ ಇದ್ದಷ್ಟೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚಿನ ಸಂಖ್ಯೆ ಹೊಂದಲಿದ್ದಾರೆ. ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯಲಿದೆ ಎಂಬ ಭ್ರಮೆಯಲ್ಲಿ ಈ ಹೇಳಿಕೆ ನೀಡಲಾಗಿದೆ" ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಜನಸಂಖ್ಯಾ ಬೆಳವಣಿಗೆ ದರ ಶೇ 2.1ಕ್ಕಿಂತ ಕಡಿಮೆಯಾದರೆ ಅಪಾಯ, ಕನಿಷ್ಠ 3 ಮಕ್ಕಳನ್ನಾದರೂ ಹೆರಬೇಕು: ಭಾಗವತ್ - RSS CHIEF MOHAN BHAGWAT
ಓದಿ: ನವ ದಂಪತಿ ಏಕೆ 16 ಮಕ್ಕಳನ್ನು ಹೊಂದಬಾರದು?: ತಮಿಳುನಾಡು ಸಿಎಂ ಸ್ಟಾಲಿನ್