ಮುಂಬೈ (ಮಹಾರಾಷ್ಟ್ರ): ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಸುಳ್ಳು, ಹಗರಣ ಮತ್ತು ಅವಹೇಳನಕಾರಿ ಆರೋಪಗಳನ್ನು ಹೊರಿಸಿದ ಶಿವಸೇನಾ ಸಂಸದ ಸಂಜಯ್ ರಾವತ್ ಮತ್ತು ಇತರರ ವಿರುದ್ಧ ಭಾರತೀಯ ವಕೀಲರ ಸಂಘವು ನಿಂದನೆ ಅರ್ಜಿ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿದಾರರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಸಾಮ್ನಾ ಸಂಪಾದಕಿ ರಶ್ಮಿ ಠಾಕ್ರೆ ವಿರುದ್ಧ ದೂರು ಸಲ್ಲಿಸಿದ್ದಾರೆ.
ಬಿಜೆಪಿ ನಾಯಕ ಕಿರಿತ್ ಸೋಮಯ್ಯಗೆ ಪರಿಹಾರ ನೀಡುವಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಇಡೀ ನ್ಯಾಯಾಂಗದ ವಿರುದ್ಧ ಸಂಜಯ್ ರಾವತ್ ಮಾಡಿದ ಆರೋಪಗಳು ಅರ್ಜಿ ಸಲ್ಲಿಸಲು ಪ್ರಮುಖ ಕಾರಣ ಎಂದು ಭಾರತೀಯ ವಕೀಲರ ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ಓದಿ: ವಿಕ್ರಾಂತ್ ಹಡಗು ಹಗರಣ: ಬಿಜೆಪಿ ನಾಯಕ ಮತ್ತು ಅವರ ಮಗನ ವಿರುದ್ಧ ಮಾಜಿ ಸೈನಿಕರಿಂದ ದೂರು
ಸಂಜಯ್ ರಾವತ್ ಪ್ರಕಾರ, ನ್ಯಾಯಾಲಯಗಳು ಒಂದೆಡೆ ಬಿಜೆಪಿಗೆ ಸಂಬಂಧಿಸಿದ ಜನರಿಗೆ ಪರಿಹಾರವನ್ನು ನೀಡುತ್ತವೆ. ಆದರೆ ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಇತ್ಯಾದಿಗಳಿಗೆ ಸೇರಿದ ಆರೋಪಿಗಳಿಗೆ ಪರಿಹಾರವನ್ನು ನೀಡುತ್ತಿಲ್ಲ. ನ್ಯಾಯಾಲಯಗಳು ಜೈಲಿನಲ್ಲಿರುವ ಸಚಿವರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ಗೆ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ. ಆದ್ರೆ ಸ್ಥಗಿತಗೊಂಡ ನೌಕಾಪಡೆಯ ವಿಮಾನವಾಹಕ ನೌಕೆ ವಿಕ್ರಾಂತ್ ಉಳಿಸುವ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಕಿರಿತ್ ಸೋಮಯ್ಯಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು ಎಂದು ಆರೋಪಿಸಿದ್ದರು.
ಕಿರಿತ್ ಸೋಮಯ್ಯ ಮತ್ತು ಅವರ ಮಗ ನೀಲ್ ಸೋಮಯ್ಯ ವಿರುದ್ಧ ಐಎನ್‌ಎಸ್ ವಿಕ್ರಾಂತ್ ಹಣಕಾಸಿನ ಅವ್ಯವಹಾರಕ್ಕಾಗಿ ಮುಂಬೈನ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 420, 406 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನೌಕಾಪಡೆಯ ಮೆಜೆಸ್ಟಿಕ್-ಕ್ಲಾಸ್ ವಿಮಾನವಾಹಕ ನೌಕೆ INS ವಿಕ್ರಾಂತ್ 1961 ರಲ್ಲಿ ಕಾರ್ಯಾರಂಭ ಮಾಡಿತು. 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪೂರ್ವ ಪಾಕಿಸ್ತಾನದ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ವಿಕ್ರಾಂತ್ ಪ್ರಮುಖ ಪಾತ್ರವನ್ನು ವಹಿಸಿತ್ತು. 1997 ರಲ್ಲಿ ವಿಕ್ರಾಂತ್ ಕಾರ್ಯ ಸ್ಥಗಿತಗೊಂಡಿತ್ತು. ಜನವರಿ 2014 ರಲ್ಲಿ, ಹಡಗನ್ನು ಆನ್‌ಲೈನ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು ಮತ್ತು ಅದೇ ವರ್ಷ ನವೆಂಬರ್‌ನಲ್ಲಿ ಆ ಹಡಗನ್ನು ಸ್ಕ್ರ್ಯಾಪ್ ಮಾಡಲಾಯಿತು.