ಉದಯಪುರ(ರಾಜಸ್ಥಾನ): ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪರಿ ಬಿಷ್ಣೋಯ್ ಹಾಗೂ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಿ ಭವ್ಯಾ ಬಿಷ್ಣೋಯ್ ಹಸೆಮಣೆಯೇರಲು ಸಜ್ಜಾಗಿದ್ದಾರೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗಳಾದ ಭವ್ಯಾ ಬಿಷ್ಣೋಯ್ ಆದಂಪುರ ಕ್ಷೇತ್ರದ ಶಾಸಕಿಯಾಗಿದ್ದು, ಈಶಾನ್ಯ ರಾಜ್ಯ ಸಿಕ್ಕಿಂ ಕೇಡರ್‌ನ ಐಎಎಸ್ ಅಧಿಕಾರಿ ಪರಿ ವಿಷ್ಣೋಯ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜಸ್ಥಾನದ 'ಸರೋವರಗಳ ನಗರಿ' ಎಂದೇ ಖ್ಯಾತಿ ಪಡೆದಿರುವ ಉದಯಪುರದಲ್ಲಿ ಪರಿ ಬಿಷ್ಣೋಯ್ ಮತ್ತು ಭವ್ಯಾ ಬಿಷ್ಣೋಯ್ ಅವರ ಅದ್ಧೂರಿ ವಿವಾಹೋತ್ಸವ ನಡೆಯಲಿದೆ. ಇಲ್ಲಿನ ರೆಸಾರ್ಟ್‌ವೊಂದರಲ್ಲಿ ಡಿಸೆಂಬರ್ 22ರಂದು ಸಮಾರಂಭ ಏರ್ಪಡಿಸಲಾಗಿದೆ. ಈ ಮದುವೆಗೆ ಮೂರು ಲಕ್ಷಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಮೂರು ಕಡೆ ಆರತಕ್ಷತೆ: ಭವ್ಯಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಕುಲದೀಪ್ ಬಿಷ್ಣೋಯ್ ಮತ್ತು ರೇಣುಕಾ ಬಿಷ್ಣೋಯ್ ಅವರ ಪುತ್ರಿಯಾಗಿರುವ ಇವರು ತಮ್ಮ ಅಜ್ಜ ಭಜನ್ ಲಾಲ್ ಅವರ ರಾಜಕೀಯ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಮೂರು ಕಡೆ ಇವರ ಮದುವೆಯ ಆರತಕ್ಷತೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿ.24ರಂದು ಪುಷ್ಕರ್, ಡಿ.26ರಂದು ಹರಿಯಾಣದ ಹಿಸಾರ್ ಜಿಲ್ಲೆಯ ಆದಂಪುರ ಮತ್ತು ಡಿ.27ರಂದು ನವದೆಹಲಿಯಲ್ಲಿ ಮೂರನೇ ಆರತಕ್ಷತೆ ಸಮಾರಂಭ ಏರ್ಪಡಿಸಲಾಗಿದೆ. ದೆಹಲಿಯಲ್ಲಿ ನಡೆಯುವ ಆರತಕ್ಷತೆಯಲ್ಲಿ ಹಲವು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.
ವಿವಾಹ ಸಮಾರಂಭಗಳಿಗೆ ನೆಚ್ಚಿನ ತಾಣ ಉದಯಪುರ: ಆಕರ್ಷಕ ಸ್ಥಳಗಳನ್ನು ಹೊಂದಿರುವ ಉದಯಪುರ ಅದ್ಧೂರಿ ವಿವಾಹ ಸಮಾರಂಭಗಳಿಗೆ ನೆಚ್ಚಿನ ತಾಣವೂ ಹೌದು. ದೊಡ್ಡ ದೊಡ್ಡ ಮನೆತನದವರು, ರಾಜಮನೆತನದವರು ಹಾಗೂ ರಾಜಕಾರಣಿಗಳ ಕುಟುಂಬಸ್ಥರು ಹಾಗೂ ಖ್ಯಾತ ನಟ-ನಟಿಯರು, ಉದ್ಯಮಿಗಳು ಹಾಗೂ ಗಣ್ಯರು ತಮ್ಮ ಮದುವೆ ಕಾರ್ಯಕ್ರಮಗಳನ್ನು ಉದಯಪುರದಲ್ಲಿ ಆಯೋಜಿಸಲು ಹೆಚ್ಚು ಒಲವು ತೋರುತ್ತಾರೆ.
ಇತ್ತೀಚೆಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೂಡ ಉದಯಪುರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ, ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರನ ವಿವಾಹವೂ ಇಲ್ಲಿಯೇ ಜರುಗಿತ್ತು. ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳಿಗೂ ಉದಯಪುರ ನೆಚ್ಚಿನ ತಾಣ.
ಇದನ್ನೂ ಓದಿ: ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿಜಯ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ