ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ಬಳಿಕ ಉಭಯ ದೇಶಗಳ ಗಡಿ ಭಾಗದಲ್ಲಿ ಉಂಟಾಗಿದ್ದ ಯುದ್ಧ ಭೀತಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಇಂದು ಪ್ರತಿಷ್ಠಿತ 'ವೀರ ಚಕ್ರ ಪ್ರಶಸ್ತಿ' (Abhinandan Varthaman gets Vir Chakra) ಪ್ರದಾನ ಮಾಡಿದ್ದಾರೆ.
2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಸ್ಫೋಟದಲ್ಲಿ (2019 Pulwama attack) 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಫೆ.26ರಂದು ಪಾಕಿಸ್ತಾನದ ಬಾಲಾಕೋಟ್ನಲ್ಲಿನ ಉಗ್ರರ ಶಿಬಿರದ ಮೇಲೆ ವೈಮಾನಿಕ ದಾಳಿ (Balakot airstrike) ನಡೆಸಿ ಭಾರತೀಯ ಪಡೆ ಅನೇಕರನ್ನು ಸದೆ ಬಡಿದಿತ್ತು.
ಬಾಲಾಕೋಟ್ ವೈಮಾನಿಕ ದಾಳಿಯ ಮಾರನೇ ದಿನ, ಅಂದರೆ ಫೆ.27ರಂದು ಪಾಕ್ನ ಎಫ್-16 ಯುದ್ಧ ವಿಮಾನವು ಭಾರತ ಸೇನೆಯನ್ನು ಗುರಿಯಾಗಿಸಿಕೊಂಡು ಮತ್ತೊಂದು ದಾಳಿ ನಡೆಸಲು ಬರುತ್ತಿತ್ತು. ಇದನ್ನು MiG-21 ಜೆಟ್ನಿಂದ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಹೊಡೆದುರುಳಿಸಿ, ಪಾಕ್ ಗಡಿಯೊಳಗೆ ಬಿದ್ದಿದ್ದರು.
ಇದನ್ನೂ ಓದಿ: ವಿಂಗ್ ಕಮಾಂಡರ್ ಅಭಿನಂದನ್ಗೆ ವಾಯುಪಡೆಯ ಪ್ರತಿಷ್ಠಿತ ಪ್ರಶಸ್ತಿ
ಮೂರು ದಿನಗಳ ಕಾಲ ಪಾಕ್ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದರು ಅಭಿನಂದನ್ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರ ಹೋರಾಟ ನಡೆಸಿ ಬಿಡಿಸಿಕೊಂಡು ತಾಯ್ನಾಡಿಗೆ ಮರಳಿ ತಂದಿತ್ತು. ವಿಂಗ್ ಕಮಾಂಡರ್ ಆಗಿದ್ದ ವರ್ಧಮಾನ್ ಇತ್ತೀಚೆಗೆ ಭಾರತೀಯ ವಾಯುಪಡೆಯ ಏಸ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದಿದ್ದರು.
ಇವರಿಗೆ 2019ರ ಅಕ್ಟೋಬರ್ನಲ್ಲಿ ವಾಯುಪಡೆಯ ಪ್ರತಿಷ್ಠಿತ ಪ್ರಶಸ್ತಿಯಾದ 'ಯೂನಿಟ್ ಸಿಟೇಷನ್ ಅವಾರ್ಡ್' ನೀಡಿ ಗೌರವಿಸಲಾಗಿತ್ತು. ಇದೀಗ ಸೇನೆಯ ಮೂರನೇ ಅತ್ಯುನ್ನತ ಪುರಸ್ಕಾರವಾದ ವೀರಚಕ್ರ ಪ್ರಶಸ್ತಿ ನೀಡಲಾಗಿದೆ.